ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕ ಮತ್ತು ಕೆನಡಾ ನಡುವಿನ ವ್ಯಾಪಾರ ಸಂಬಂಧಗಳು ಮತ್ತೊಮ್ಮೆ ಉದ್ವಿಗ್ನವಾಗಿವೆ. ಅಮೆರಿಕದ ಮಾಜಿ ಅಧ್ಯಕ್ಷ ಹಾಗೂ ಪ್ರಸ್ತುತ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಕೆನಡಾದ ಆಮದುಗಳ ಮೇಲೆ ಹೆಚ್ಚುವರಿ 10% ಸುಂಕ ವಿಧಿಸುವುದಾಗಿ ಘೋಷಣೆ ಮಾಡಿದ್ದಾರೆ. ಈ ನಿರ್ಧಾರದಿಂದ ಕೆನಡಾದ ಮೇಲಿನ ಒಟ್ಟು ಸುಂಕದ ಪ್ರಮಾಣ ಈಗ 45%ಕ್ಕೆ ಏರಿಕೆಯಾಗಿದೆ.
ಈ ಕ್ರಮದ ಹಿಂದಿನ ಕಾರಣ ರಾಜಕೀಯ ಮತ್ತು ಮಾಧ್ಯಮ ಪ್ರಚಾರಗಳ ಸುತ್ತ ತಿರುಗಿದೆ. ಇತ್ತೀಚೆಗೆ ಒಂಟಾರಿಯೋ ಸರ್ಕಾರ MLB ವಿಶ್ವ ಸರಣಿಯ ಮೊದಲ ಪಂದ್ಯಾವಳಿಯ ಸಮಯದಲ್ಲಿ 75 ದಶಲಕ್ಷ ಡಾಲರ್ ವೆಚ್ಚದಲ್ಲಿ ಪ್ರಸಾರ ಮಾಡಿದ ಜಾಹೀರಾತು ಟ್ರಂಪ್ ಅವರ ಅಸಮಾಧಾನಕ್ಕೆ ಕಾರಣವಾಯಿತು. ಆ ಜಾಹೀರಾತಿನಲ್ಲಿ “ಟ್ರಂಪ್ ಒಮ್ಮೆ ನಿರ್ಧಾರ ಮಾಡಿದರೆ ಅದನ್ನು ಯಾರೂ ತಡೆದು ನಿಲ್ಲಿಸಲಾರರು, ಅವರು ತಮ್ಮ ಮಾತನ್ನೂ ಕೇಳುವುದಿಲ್ಲ” ಎಂಬ ವ್ಯಂಗ್ಯಪೂರ್ಣ ಸಂದೇಶವಿತ್ತು.
ಈ ಜಾಹೀರಾತು ಟ್ರಂಪ್ ಅವರ ಕೋಪಕ್ಕೆ ಕಾರಣವಾಗಿ, ಅವರು ತಕ್ಷಣವೇ ಕೆನಡಾ ಮೇಲಿನ ಸುಂಕವನ್ನು ಹೆಚ್ಚಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ. ತನ್ನ ಸೋಷಿಯಲ್ ಮೀಡಿಯಾ ವೇದಿಕೆ ಟ್ರುತ್ ಔಟ್ ನಲ್ಲಿ ಈ ಕುರಿತು ಪೋಸ್ಟ್ ಹಂಚಿಕೊಂಡಿರುವ ಟ್ರಂಪ್, “ಕೆನಡಾ ನಮ್ಮ ವ್ಯಾಪಾರ ವ್ಯವಸ್ಥೆಯನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದೆ. ಅಮೆರಿಕದ ಹಿತಾಸಕ್ತಿ ಕಾಪಾಡಲು ಅಗತ್ಯ ಕ್ರಮ ಕೈಗೊಂಡಿದ್ದೇನೆ” ಎಂದು ಹೇಳಿದ್ದಾರೆ.
ಕೆನಡಾ ಸರ್ಕಾರದ ಜಾಹೀರಾತಿನಲ್ಲಿ ಮಾಜಿ ಅಮೆರಿಕ ಅಧ್ಯಕ್ಷ ರೊನಾಲ್ಡ್ ರೇಗನ್ ಅವರ ವೀಡಿಯೋ ಕ್ಲಿಪ್ ಸಹ ಬಳಸಲಾಗಿದ್ದು, ಅದರಲ್ಲಿ ಸುಂಕದ ನೀತಿಗಳು ವ್ಯಾಪಾರ ಯುದ್ಧ ಹಾಗೂ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗಬಹುದು ಎಂದು ಎಚ್ಚರಿಸಲಾಗಿತ್ತು. ಇದನ್ನೇ ಟ್ರಂಪ್ ಸುಳ್ಳು ಮತ್ತು ಪ್ರಚೋದನಾತ್ಮಕ ಎಂದು ಟೀಕಿಸಿದ್ದರು.

