ಹೊಸದಿಗಂತ ಡಿಜಿಟಲ್ ಡೆಸ್ಕ್:
76ನೇ ಗಣರಾಜ್ಯೋತ್ಸವ ಅಂಗವಾಗಿ ರಾಷ್ಟ್ರ ರಾಜಧಾನಿ ದಿಲ್ಲಿಯ ಕರ್ತವ್ಯ ಪಥದಲ್ಲಿ ಆಯೋಜಿಸಿದ್ದ ಸೇನೆಗಳ ಶಕ್ತಿ ಪ್ರದರ್ಶನ, ಪಥ ಸಂಚಲನ, ಸ್ತಬ್ಧ ಚಿತ್ರಗಳ ಪ್ರದರ್ಶನ, ಕಲಾ ತಂಡಗಳ ಪ್ರದರ್ಶನ ಸೇರಿದಂತೆ ಹಲವು ಕಾರ್ಯಕ್ರಮಗಳು ಗಮನ ಸೆಳೆದಿವೆ. ಈ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ಅವರು ಕರ್ತವ್ಯ ಪಥದಲ್ಲಿ ಬಿದ್ದಿದ್ದ ಕಸವನ್ನು ಹೆಕ್ಕುವ ಮೂಲಕ ಸ್ವಚ್ಛ ಭಾರತದ ಬಗ್ಗೆ ತಮಗಿರುವ ಬದ್ಧತೆಯನ್ನು ಪ್ರದರ್ಶಿಸಿದ್ದಾರೆ.
ಸದ್ಯ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ (Viral Video) ಭಾರಿ ಸದ್ದು ಮಾಡುತ್ತಿದೆ.
ಕರ್ತವ್ಯ ಪಥದಲ್ಲಿ ಪ್ರೋಟೋಕಾಲ್ ಪ್ರಕಾರ ಪ್ರಧಾನಿ ಮೋದಿ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಅವರನ್ನು ಸ್ವಾಗತಿಸಲು ಸಜ್ಜಾಗಿದ್ದರು. ಈ ವೇಳೆ ಅವರು ಕೆಳಗೆ ಬಿದ್ದಿದ್ದ ಕಸವನ್ನು ಎತ್ತಿದ್ದಾರೆ. ಸದ್ಯ ಈ ವಿಡಿಯೊ ವೀಕ್ಷಿಸಿದ ನೆಟ್ಟಿಗರು ಪ್ರಧಾನಿ ಮೋದಿ ಅವರ ಸರಳತೆಗೆ ಮೆಚ್ಚುಗೆ ಸೂಚಿಸಿದ್ದಾರೆ.
ಉಪರಾಷ್ಟ್ರಪತಿ ಅವರ ವಾಹನ ಬರುತ್ತಿರುವುದನ್ನು ಗಮನಿಸಿದ ಪಿಎಂ ಮೋದಿ ಅವರನ್ನು ಸ್ವಾಗತಿಸಲು ಮುಂದೆ ಸಾಗಿದರು. ಈ ವೇಳೆ ನೆಲದ ಮೇಲೆ ಬಿದ್ದಿದ್ದ ಕಸವನ್ನು ಗಮನಿಸಿದರು. ಕೂಡಲೇ ಅವರು ಬಾಗಿ ತ್ಯಾಜ್ಯವನ್ನು ಎತ್ತಿಕೊಂಡು ತನ್ನ ಭದ್ರತಾ ಸಿಬ್ಬಂದಿಗೆ ಹಸ್ತಾಂತರಿಸಿದರು. ಕೆಲವೇ ಸೆಕೆಂಡ್‌ಗಳ ವಿಡಿಯೊ ಇದಾಗಿದ್ದರೂ ಲಕ್ಷಾಂತರ ಮಂದಿಯ ಗಮನ ಸೆಳೆದಿದೆ.
2014ರಲ್ಲಿ ಮೋದಿ ಅವರು ಸ್ವಚ್ಛ ಭಾರತ ಅಭಿಯಾನ ಆರಂಭಿಸಿದ್ದರು. ಈ ವಿಡಿಯೊ ವೀಕ್ಷಿಸಿದ ಹಲವರು ಮೋದಿ ಅವರು ಸ್ವಚ್ಛ ಭಾರತ ಅಭಿಯಾನಕ್ಕೆ ಕರೆ ನೀಡಿದ್ದು ಮಾತ್ರವಲ್ಲದೆ ಸ್ವತಃ ಅವರೇ ಅದನ್ನು ಜಾರಿಗೆ ತರುತ್ತಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.