June 21, 2026
Sunday, June 21, 2026
spot_img

ಚುನಾವಣೆ, ಪಟ್ಟಾಭಿಷೇಕ ಎಲ್ಲ ಮುಗ್ದಿದ್ರೆ ಸ್ವಲ್ಪ ಆಡಳಿತದ ಕಡೆ ಗಮನಹರಿಸಿ: ಜೋಶಿ

ಹೊಸದಿಗಂತ ವರದಿ ಬೆಳಗಾವಿ :

ರಾಜ್ಯದಲ್ಲಿ ಎದುರಾಗಿರುವ ಮಳೆ ಅಭಾವದ ಕುರಿತು ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಚುನಾವಣೆ ಹಾಗೂ ಪಟ್ಟಾಭಿಷೇಕದ ಗುಂಗಿನಿಂದ ಹೊರಬಂದು ಆಡಳಿತದತ್ತ ಗಮನಹರಿಸುವಂತೆ ಮುಖ್ಯಮಂತ್ರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ರಾಜ್ಯದಲ್ಲಿನ ಮಳೆ ಕೊರತೆ ಇದೆ. ಈ ಬಾರಿ ‘ಸೂಪರ್ ಎಲ್ನಿನೋ’ ಪ್ರಭಾವದಿಂದ ದೇಶಾದ್ಯಂತ ಶೇ. 40ರಷ್ಟು ಮಳೆ ಕೊರತೆಯಾಗುವ ಸಾಧ್ಯತೆಯಿದೆ. ರಾಜ್ಯದ ಮುಖ್ಯಮಂತ್ರಿಗಳಿಗೆ ಹೇಳುತ್ತಿದ್ದೇನೆ, ಚುನಾವಣೆ ಹಾಗೂ ಪಟ್ಟಾಭಿಷೇಕ ಎಲ್ಲವೂ ಮುಗಿದಿದೆ. ದೊಡ್ಡ ಕಾರ್ಯಕ್ರಮಗಳು ಮತ್ತು ಭ್ರಷ್ಟಾಚಾರದ ಹಣವನ್ನು ಹೇಗೆ ಖರ್ಚು ಮಾಡುವುದು ಎಂಬುದರ ಮೇಲೆಯೇ ನಿಮ್ಮ ಗಮನವಿದ್ದಂತಿದೆ. ಇದನ್ನು ಬಿಟ್ಟು ಆಡಳಿತದ ಕಡೆ ಗಮನಹರಿಸಿ ಎಂದು ತೀಕ್ಷ್ಣವಾಗಿ ಟೀಕಿಸಿದರು.

ಮಳೆ ಕೊರತೆಯಿಂದ ದೊಡ್ಡ ವಿಪತ್ತು ಎದುರಾಗಲಿದ್ದು, ಮೇವು ಮತ್ತು ಕುಡಿಯುವ ನೀರಿನ ಅಭಾವ ಸೃಷ್ಟಿಯಾಗಲಿದೆ. ಕೂಡಲೇ ಕೃಷಿ ಮಂತ್ರಿಯನ್ನು ನೇಮಿಸಿ, ಕಂದಾಯ ಸಚಿವರಿಗೆ ಜವಾಬ್ದಾರಿ ನೀಡಿ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು. ಕೇಂದ್ರ ಸರ್ಕಾರವು ನಮ್ಮ ಇಲಾಖೆಯ ಮೂಲಕ ಆಹಾರ ಪೂರೈಕೆ ನಿರ್ವಹಣೆ ಮಾಡುತ್ತಿದ್ದು, ದೊಡ್ಡ ಪ್ರಮಾಣದಲ್ಲಿ ಆಹಾರ ಸಂಗ್ರಹಿಸಿಟ್ಟುಕೊಂಡಿದ್ದೇವೆ ಎಂದು ಭರವಸೆ ನೀಡಿದರು.

ರಾಜ್ಯ ಬಿಜೆಪಿಯಲ್ಲಿ ನಾಯಕತ್ವದ ಕೊರತೆ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಪರಿಷತ್ ಚುನಾವಣೆಯ ಅಡ್ಡ ಮತದಾನವನ್ನು ಕೇಂದ್ರದ ನಾಯಕರು ಗಂಭೀರವಾಗಿ ಪರಿಗಣಿಸಿರುವುದು ನಿಜ. ಆದರೆ ಯಾವುದೇ ಒಂದು ಘಟನೆಯ ಆಧಾರದ ಮೇಲೆ ನಾಯಕತ್ವದ ಕೊರತೆ ಬಗ್ಗೆ ತೀರ್ಮಾನ ಮಾಡಲು ಸಾಧ್ಯವಿಲ್ಲ. ಪಕ್ಷವು ಅನೇಕ ಅಡೆತಡೆ, ಏಳು-ಬೀಳುಗಳನ್ನು ಎದುರಿಸಿ ದೇಶಾದ್ಯಂತ ಗಟ್ಟಿಯಾಗಿ ನಿಂತಿದೆ. ಅಡ್ಡಮತದಾನದ ಘಟನೆಯೊಂದು ಅತ್ಯಂತ ಗಂಭೀರವಾಗಿದ್ದು, ರಾಷ್ಟ್ರೀಯ ನಾಯಕರು ಅದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. 2028ಕ್ಕೆ ರಾಜ್ಯದಲ್ಲಿ ಮರಳಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಅಗತ್ಯ ಕೆಲಸ ಮಾಡುತ್ತೇವೆ ಎಂದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !