ಜಿನರನ್ನು ಅನುಸರಿಸಿ ಮೋಕ್ಷದ ದಾರಿ ಕಂಡುಕೊಳ್ಳಬಹುದು: ಮುನಿಶ್ರೀ 108 ಅಮೋಘಕೀರ್ತಿ ಮಹಾರಾಜ್

ಹೊಸದಿಗಂತ ವರದಿ, ಕೆ.ಆರ್.ಪೇಟೆ:

ಜಿನರಾಗುವುದು ಕಠಿಣ. ಆದರೆ ಜಿನರನ್ನು ಅನುಸರಿಸುವ ಮೂಲಕ ನಾವು ಮೋಕ್ಷದ ದಾರಿಯನ್ನು ಕಂಡುಕೊಳ್ಳಬಹುದು ಎಂದು ಜಿನಯತಿಗಳಾದ ಮುನಿಶ್ರೀ 108 ಅಮೋಘಕೀರ್ತಿ ಮಹಾರಾಜ್ ಹೇಳಿದರು.

ತಾಲೂಕಿನ ಕೃಷ್ಣರಾಜ ಸಾಗರ ಹಿನ್ನೀರಿಗೆ ಹೊಂದಿಕೊಂಡಿರುವ ಬಸದಿ ಹೊಸಕೋಟೆ ಗ್ರಾಮದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿರುವ ಅಳಿವಿನಂಚಿನಲ್ಲಿದ್ದ 18 ಅಡಿ ಎತ್ತರದ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಮೂಲ ವಿಗ್ರಹದ ಪುನರ್ ಪ್ರತಿಷಾಪನಾ ಮಹೋತ್ಸವ ಮತ್ತು ಸಿದ್ದ ಚಕ್ರ ಆರಾಧನೆ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಅವರು ಜಿನ ಸಂದೇಶ ನೀಡಿದರು.

ಜೈನ ಧರ್ಮದ ಮಹತ್ವವನ್ನು ತಿಳಿಸಿದ ಅಮೋಘಕೀರ್ತಿ ಮಹಾರಾಜ್ ಜಗತ್ತಿನಲ್ಲಿ ಅಹಿಂಸೆಯನ್ನು ಪರಮ ಧರ್ಮವನ್ನಾಗಿ ನಂಬಿದವರು ಜೈನರು. ಜಗತ್ತಿನ ಶಾಂತಿಗೆ ಜೈನ ಧರ್ಮದಲ್ಲಿ ಮದ್ದಿದೆ ಎಂದರು. ಆತ್ಮ ಕಲ್ಯಾಣಕ್ಕೆ ಜೈನಧರ್ಮ ಮೊದಲ ಆದ್ಯತೆ ನೀಡುತ್ತದೆ. ಸ್ವ ಆತ್ಮ ಚಿಂತನೆ ಉತ್ತಮ, ದೇಹ ಚಿಂತನೆ ಮದ್ಯಮ, ಕಾಮ ಚಿಂತನೆ ಅಧಮ ಎಂದ ಮುನಿಶ್ರೀಗಳು ಬಾಹುಬಲಿಗೆ 8 ಸಾವಿರ ಪತ್ನಿಯರಿದ್ದರು. ಬಾಹುಬಲಿಯ ಅಣ್ಣ ಭರತನಿಗೆ 96 ಸಾವಿರ ಜನ ಪತ್ನಿಯರಿದ್ದರು. ಅರಮನೆಯ ಸುಖವನ್ನು ತ್ಯಜಿಸಿದ ಅನಂತರವೇ ಇವರು ಮಾನವಶ್ರೇಷ್ಠರಾದರು. ಭೋಗವನ್ನು ತ್ಯಜಿಸಿ ಮನುಷ್ಯ ತ್ಯಾಗಿಗಳಾಗಬೇಕೆಂದರು.

ಬಸದಿ ಹೊಸಕೋಟೆಯ ಗೊಮ್ಮಟ ಕರ್ನಾಟಕದಲ್ಲಿ ನಿರ್ಮಾಣಗೊಂಡ ಮೂರನೆಯ ಅತಿ ಪ್ರಾಚೀನ ಶಿಲ್ಪ. ರಾಜ್ಯದ ಕಾರ್ಕಳ, ವೇಣೂರು, ಗೊಮ್ಮಟಗಿರಿ, ಬಾದಾಮಿ ಮುಂತಾದ ಕಡೆ ಗೊಮ್ಮಟ ವಿಗ್ರಹಗಳನ್ನು ಕಾಣಬಹುದು. ಗೊಮ್ಮಟ ವಿಗ್ರಹಗಳು ಎಷ್ಟೇ ಇದ್ದರು ಮೂಲ ಆದರ್ಶಗಳು ಮಾತ್ರ ಒಂದೇ. ಅದುವೇ ತ್ಯಾಗ. ತ್ಯಾಗದ ಮೂಲಕ ಆತ್ಮ ಚಿಂತನೆ ಮಾಡಿದವರು ಜಿನರಾದರು. ಜಿನರನ್ನು ಅನುಸರಿಸಿದವರು ಜೈನರಾದರು ಎಂದ ಅಮೋಘ ಕೀರ್ತಿ ಮಹಾರಾಜ ಯತಿಗಳು ಜೈನ ಧರ್ಮವನ್ನು ಎಲ್ಲರೂ ಆಚರಿಸಬಹುದು. ಜೈನ ಧರ್ಮಕ್ಕೆ ಗೋಡೆಗಳಿಲ್ಲ. ಇದು ಪ್ರಾಕೃತಿಕ ಧರ್ಮ. ಸಕಲ ಜೀವಿಗಳಲ್ಲೂ ನಾವು ಭಗವಂತನನನು ಕಾಣುತ್ತೇವೆ. ಎಲ್ಲವನ್ನೂ ತ್ಯಜಿಸಿ ಜಿನರಾಗುವುದು ಕಠಿಣ. ಆದರೆ ಜಿನರನ್ನು ಅನುಸರಿಸಿ ಆರಾಧಿಸುವುದು ಸುಲಭ. ಜಿನಾರಾಧನೆಯ ಮೂಲಕ ಎಲ್ಲರೂ ಜೈನರಾಗಬಹುದು. ಆತ್ಮ ಶುದ್ದಿ ಮಾಡಿಕೊಳ್ಳುವುದು ಜಿನಾನುಯಾಯಿಗಳ ಪರಮ ಗುರಿ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!