ಹೊಸದಿಗಂತ ವರದಿ ಉಡುಪಿ:
ಪೆಟ್ರೋಲ್ ಬಂಕ್ ನಲ್ಲಿ ನಿದ್ರಿಸುತ್ತಿದ್ದ ಕಾರ್ಮಿಕರ ಮೇಲೆ ಟಿಪ್ಪರ್ ಹರಿದು, ಓರ್ವ ಸ್ಥಳದಲ್ಲೇ ಮೃತಪಟ್ಟು, ಇನ್ನೋರ್ವ ಗಂಭೀರ ಗಾಯಗೊಂಡ ಘಟನೆ ಹೆಬ್ರಿ ಸಮೀಪದ ಸೋಮೇಶ್ವರ ಪೆಟ್ರೋಲ್ ಬಂಕ್ ಆವರಣದಲ್ಲಿ ಶುಕ್ರವಾರ ಮುಂಜಾನೆ ನಡೆದಿದೆ.
ಶಿವರಾಜ್ (38) ಮೃತ ದುರ್ದೈವಿ. ಮಹೇಂದ್ರ ಗಾಯಗೊಂಡಿದ್ದು, ಮಣಿಪಾಲ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯ ವಿವರ:
ಸಾಗರ ತಾಲೂಕಿನ ಕೊರ್ಲಿಕೊಪ್ಪ ಗ್ರಾಮದ ನಿವಾಸಿಗಳಾದ ಇಬ್ಬರು, ವಾಹನದಲ್ಲಿ ಬಾಳೆಕಾಯಿಯನ್ನು ಮಾರಾಟಕ್ಕೆಂದು ತಂದಿದ್ದರು. ರಾತ್ರಿ ಪೆಟ್ರೋಲ್ ಬಂಕ್ ನಲ್ಲಿ ವಾಹನವನ್ನು ನಿಲ್ಲಿಸಿ, ಆವರಣದಲ್ಲಿ ಮಲಗಿದ್ದರು.
ಮುಂಜಾನೆ ಸುಮಾರು 4 ರಿಂದ 6 ಗಂಟೆಯ ನಡುವೆ ಪೆಟ್ರೋಲ್ ಬಂಕ್ ಗೆ ಬಂದ ಬೃಹತ್ ಟಿಪ್ಪರ್, ಪೆಟ್ರೋಲ್ ಹಾಕಿಕೊಂಡು ತೆರಳುವ ವೇಳೆ, ಚಾಲಕನ ಅಜಾಗರೂಕತೆಯಿಂದ ಅಲ್ಲೇ ಪಕ್ಕದಲ್ಲಿ ಮಲಗಿದ್ದವರ ಮೇಲೆ ಹರಿದಿದೆ. ಇದರ ಪರಿಣಾಮ ಓರ್ವ ಸ್ಥಳದಲ್ಲೇ ಮೃತಪಟ್ಟು, ಇನ್ನೋರ್ವ ಗಂಭೀರ ಗಾಯಗೊಂಡಿದ್ದಾನೆ. ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.