ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ‘ಒಂದು ಸೂರ್ಯ – ಒಂದು ಪ್ರಪಂಚ – ಒಂದು ಗ್ರಿಡ್’ ಧ್ಯೇಯದೊಂದಿಗೆ ಭಾರತವು ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಮಹತ್ತರ ಹೆಜ್ಜೆ ಇರಿಸಿದೆ. ಈ ನಿಟ್ಟಿನಲ್ಲಿ, ಚೀನಾ ಸೇರಿದಂತೆ ವಿಶ್ವಸಂಸ್ಥೆಯ ಎಲ್ಲಾ ಸದಸ್ಯ ರಾಷ್ಟ್ರಗಳು ಅಂತರಾಷ್ಟ್ರೀಯ ಸೌರ ಒಕ್ಕೂಟ ಸೇರುವುದಕ್ಕೆ ಭಾರತವು ಮುಕ್ತ ನಿಲುವನ್ನು ಹೊಂದಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್ ಜೋಶಿ ಅವರು ಸ್ಪಷ್ಟಪಡಿಸಿದ್ದಾರೆ.
ದೆಹಲಿಯಲ್ಲಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ವಿಶ್ವದ ನೂರಾರು ರಾಷ್ಟ್ರಗಳು ಈಗಾಗಲೇ ಭಾರತದ ಸೌರ ಪ್ರಗತಿಗೆ ಬೆಂಬಲ ನೀಡಿ, ಭಾರತದ ನೇತೃತ್ವದ ISA ಯನ್ನು ಪ್ರತಿನಿಧಿಸುತ್ತಿವೆ. ಜಾಗತಿಕ ಇಂಧನ ಪರಿವರ್ತನೆಗೆ ಉತ್ತೇಜನ ನೀಡುವ ಭಾಗವಾಗಿ, ಒಕ್ಕೂಟಕ್ಕೆ ಸೇರಲು ಇಚ್ಛಿಸುವ ಯಾವುದೇ UN ಸದಸ್ಯ ರಾಷ್ಟ್ರಕ್ಕೆ ಭಾರತವು ಸಂಪೂರ್ಣ ಬೆಂಬಲ ನೀಡಲಿದೆ ಎಂಬುದನ್ನು ಜೋಶಿ ಖಚಿತಪಡಿಸಿದ್ದಾರೆ.
ಯುಕೆ ವಿದೇಶಾಂಗ ಕಾರ್ಯದರ್ಶಿಯಿಂದ ಮೆಚ್ಚುಗೆ
ಭಾರತದ ಇಂಧನ ಭದ್ರತೆ ಮತ್ತು ʻನಿವ್ವಳ ಶೂನ್ಯʼ ಗುರಿಗಳ ಸಾಧನೆಗೆ ಯುನೈಟೆಡ್ ಕಿಂಗ್‌ಡಮ್‌ನ ವಿದೇಶಾಂಗ ಕಾರ್ಯದರ್ಶಿ ಎಡ್ವರ್ಡ್ ಮಿಲಿಬ್ಯಾಂಡ್ ಅವರು ಭಾರೀ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಮೋದಿ ಅವರ ನಾಯಕತ್ವ ಮತ್ತು ದೂರದೃಷ್ಟಿಗೆ ಮೆಚ್ಚುಗೆ ಸೂಚಿಸಿರುವ ಮಿಲಿಬ್ಯಾಂಡ್, ನವೀಕರಿಸಬಹುದಾದ ಇಂಧನಕ್ಕಾಗಿ ಜಿ-20 ನೇತೃತ್ವದ ಒತ್ತಾಯವನ್ನು ಸ್ವಾಗತಿಸಿದ್ದಾರೆ.
ಒಂದು ಕೋಟಿ ಮನೆಗಳಿಗೆ ಸೌರ ಬೆಳಕು ತಲುಪಿಸುವ ಮತ್ತು ಸಬ್ಸಿಡಿ ಸಹಿತ ಸೌರ ಮೇಲ್ಛಾವಣಿ ಫಲಕ ಅಳವಡಿಸಿ ಉಚಿತ ವಿದ್ಯುತ್ ಒದಗಿಸುವ ಗುರಿ ಹೊಂದಿರುವ ʻಪಿಎಂ ಸೂರ್ಯ ಘರ್ʼ ಯೋಜನೆಯನ್ನು ಮಿಲಿಬ್ಯಾಂಡ್ ಅವರು ‘ವಿದ್ಯುಕ್ತ ಯೋಜನೆ’ ಎಂದು ಬಣ್ಣಿಸಿ ಸಂತಸ ವ್ಯಕ್ತಪಡಿಸಿದರು ಎಂದು ಸಚಿವ ಜೋಶಿ ತಿಳಿಸಿದರು. ಈ ಯೋಜನೆಯು ಇಂಧನ ಸುಸ್ಥಿರತೆ ಮಾತ್ರವಲ್ಲದೆ, ಭವಿಷ್ಯದ ಪೀಳಿಗೆಗೆ ಮಾದರಿ ಹೆಜ್ಜೆ ಇಡುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.
2030ರ ನವೀಕರಿಸಬಹುದಾದ ಇಂಧನ ಗುರಿಗೆ ಬದ್ಧತೆ
ಕಳೆದ ದಶಕದಲ್ಲಿ ಭಾರತದ ನವೀಕರಿಸಬಹುದಾದ ಇಂಧನ ವಲಯದಲ್ಲಿ ನಾವೀನ್ಯತೆ, ಸ್ಥಿತಿಸ್ಥಾಪಕತ್ವ ಮತ್ತು ಕಾರ್ಯತಂತ್ರದ ದೂರದೃಷ್ಟಿ ಎದ್ದು ಕಾಣುತ್ತಿದೆ. ನಿಗದಿತ ಸಮಯದೊಳಗೆ ದೇಶವು ತನ್ನ ಗುರಿಗಳನ್ನು ಸಾಧಿಸಲಿದೆ.
ಜೋಶಿ ಅವರ ಪ್ರಕಾರ, ದೇಶೀಯ ಉತ್ಪಾದನಾ ಸಾಮರ್ಥ್ಯ ಗಣನೀಯವಾಗಿ ಬೆಳೆದಿದೆ. ಭಾರತವು ತನ್ನ 2030ರ ನವೀಕರಿಸಬಹುದಾದ ಇಂಧನ ಗುರಿ ತಲುಪುವತ್ತ ಮುನ್ನುಗ್ಗುತ್ತಿದ್ದು, ವಾರ್ಷಿಕವಾಗಿ 50 GW ಸಾಮರ್ಥ್ಯವನ್ನು ಗ್ರಿಡ್‌ಗೆ ಸೇರಿಸಲು ಬದ್ಧವಾಗಿ ಕಾರ್ಯ ನಿರ್ವಹಿಸುತ್ತಿದೆ. ಸೌರ ಶಕ್ತಿ, ಪವನ ಶಕ್ತಿ ಮತ್ತು ಗ್ರೀನ್ ಹೈಡ್ರೋಜನ್ ವಲಯಗಳಲ್ಲಿ ಭಾರತವು ಈಗಾಗಲೇ ಮಹತ್ವದ ಸಾಧನೆಗಳನ್ನು ತೋರಿದೆ ಎಂದು ಅವರು ವಿವರಿಸಿದರು.

