September 2, 2026
Wednesday, September 2, 2026
spot_img

ಬಂದೂಕು ಲೈಸೆನ್ಸ್ ನವೀಕರಣ ಪ್ರಕ್ರಿಯೆ ಕಟ್ಟುನಿಟ್ಟು: NECF ಏಳು ಬೇಡಿಕೆಗಳಿಗೆ ಸರ್ಕಾರದ ತುರ್ತು ಸ್ಪಂದನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಭಾಗಗಳಲ್ಲಿ ಕೃಷಿ ರಕ್ಷಣೆ ಹೆಸರಿನಲ್ಲಿ ಹಲವು ವರ್ಷಗಳ ಹಿಂದೆ ಪಡೆದಿರುವ ಬಂದೂಕು ಪರವಾನಗಿಗಳ ನವೀಕರಣ ಮತ್ತು ಹೊಸ ಪರವಾನಗಿ ನೀಡುವ ಸಂದರ್ಭದಲ್ಲಿ ದಾಖಲೆಗಳ ಕಟ್ಟುನಿಟ್ಟಿನ ಪರಿಶೀಲನೆ ನಡೆಸಬೇಕು ಎಂಬ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ ಮನವಿಗೆ ಸರಕಾರ ತುರ್ತು ಸ್ಪಂದನೆ ನೀಡಿದೆ.

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಗೌರವ ಕಾರ್ಯದರ್ಶಿ ಎಚ್. ಶಶಿಧರ್ ಶೆಟ್ಟಿ, ಒಕ್ಕೂಟದಿಂದ ಸಲ್ಲಿಸಲಾದ ಎಲ್ಲಾ ಏಳು ಅಂಶಗಳ ಬಗ್ಗೆ ಸೂಕ್ತ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಪೊಲೀಸ್ ಮಹಾ ನಿರ್ದೇಶಕರು, ಎಲ್ಲಾ ಜಿಲ್ಲಾಧಿಕಾರಿಗಳು, ಪೊಲೀಸ್ ಆಯುಕ್ತರುಗಳಿಗೆ ಸರಕಾರದ ಮುಖ್ಯ ಕಾರ್ಯದರ್ಶಿಗಳು ಸೂಚಿಸಿದ್ದಾರೆ ಎಂದು ತಿಳಿಸಿದ್ದಾರೆ.

ಎಚ್. ಶಶಿಧರ್ ಶೆಟ್ಟಿ

ಪರಿಶೀಲನೆಗೆ ಸಲ್ಲಿಸಿದ ಏಳು ಅಂಶ ಯಾವುದು?

ಬಂದೂಕು ಪರವಾನಗಿಗಳ ನವೀಕರಣ ಮತ್ತು ಹೊಸ ಪರವಾನಗಿ ನೀಡುವ ಸಂದರ್ಭ…

  1. ಕೃಷಿ ಭೂಮಿ ಬಂದೂಕು ಪರಮಾನಿಗೆ ನವೀಕರಣ ಮಾಡುವ ಸಂದರ್ಭದಲ್ಲಿ ಅವರ ಕೃಷಿ ಭೂಮಿಯ ಆರ್ ಟಿಸಿ ಪ್ರತಿಯನ್ನು ಲಗತ್ತಿಸಬೇಕು.
  2. ಅವರು ಆ ಭೂಮಿಯಲ್ಲಿ ಕೃಷಿ ಮಾಡುತ್ತಿರುವುದರ ಕುರಿತು ಸ್ಥಳಿಯ ವಿಲೇಜ್ ಅಕೌಂಟೆಂಟ್ ಅಥವಾ/ ತೋಟಗಾರಿಕಾ ಇಲಾಖೆರವರಿಂದ ಗೂಗಲ್ ಇಮೇಜ್ ಕೃಷಿ ಫೋಟೋ ಲಗತ್ತಿಸಬೇಕು.
  3. ಕೃಷಿ ಭೂಮಿಗೆ ಕಾಡುಪ್ರಾಣಿಗಳು ಬಂದು ಕೃಷಿಯನ್ನು ಹಾಳು ಮಾಡಿರುವುದರ ಕುರಿತು ಅರಣ್ಯ ಇಲಾಖೆಗೆ ದೂರನ್ನು ನೀಡಿ ಇಲಾಖೆಯಿಂದ ಪರಿಹಾರವನ್ನು ಪಡೆದ ದಾಖಲೆಯನ್ನು ಸಲ್ಲಿಸಬೇಕು.
  4. ತಂದೆಯಿಂದ ಮಗ, ಬಂದೂಕು ಪರವಾನಿಗೆಯನ್ನು ವರ್ಗಾವಣೆ ಮಾಡಿಸಿಕೊಳ್ಳುವ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರ ಕಾರ್ಯಗಾರದಲ್ಲಿ ಭಾಗವಹಿಸಿ ಅಲ್ಲಿಂದ ಸರ್ಟಿಫಿಕೇಟ್ ಪಡೆದಿರಬೇಕು.
  5. ಬಂದೂಕು ಪರವಾನಿಗೆ ನವೀಕರಣ ಮಾಡಿಕೊಳ್ಳುವರು ಅಥವಾ ತಂದೆಯಿಂದ ವರ್ಗಾವಣೆ ಮಾಡಿಕೊಳ್ಳುವವರು ಅಥವಾ ಹೊಸ ಬಂದು ಪರವಾನಿಗೆ ಪಡೆದುಕೊಳ್ಳಲು ಇಚ್ಚಿಸುವವರು ಇವರ ಮೇಲೆ ಯಾವುದೇ ಪೋಲಿಸ್ ಠಾಣೆಯಲ್ಲಿ ಅಥವಾ ವಲಯ ಅರಣ್ಯ ಇಲಾಖೆಯಲ್ಲಿ ಯಾವುದೇ ರೀತಿಯ ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿರಬಾರದು.
  6. ಸಂಬಂಧಿಸಿದ ಪೊಲೀಸ್‌ ಠಾಣೆ ಇಂದ ಇವರು ಅವರ ಗುಣನಡತೆಯ ಸರ್ಟಿಫಿಕೇಟ್ ತಂದಿರಬೇಕು.
  7. ಇವರು ಖರೀದಿಸುವ ಯಾವುದೇ ಮದ್ದು ಗುಂಡುಗಳ ಲೆಕ್ಕಾಚಾರವನ್ನು ಪ್ರತಿ ತಿಂಗಳು ಸ್ಥಳೀಯ ಅರಣ್ಯ ಇಲಾಖೆ ಮತ್ತು ಪೊಲೀಸ್‌ ಠಾಣೆಗೆ ಲೆಕ್ಕ ಒಪ್ಪಿಸತಕ್ಕದ್ದು. ಇಲ್ಲವಾದಲ್ಲಿ ಇವರಿಗೆ ಯಾವುದೇ ಮದ್ದು ಗುಂಡುಗಳನ್ನು ಖರೀದಿಸುವ ಅಥವಾ ಇವರಿಗೆ ಯಾರು ಮದ್ದು ಗುಂಡುಗಳನ್ನು ವ್ಯಾಪಾರ ಮಾರಾಟ ಮಾಡುವ ಅವಕಾಶ ಇರಬಾರದು.

    ಈ ಅಂಶಗಳನ್ನು ಗಮನಿಸುವಂತೆ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ ಹೇಳಿತ್ತು.

ಯಾಕೆ ಈ ಅಂಶಗಳು ಮುಖ್ಯ?

ಹಲವು ದಶಕಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೃಷಿ ರಕ್ಷಣೆಗೆಂದು ಪಡೆದ ಬಂದೂಕು ಪರವಾನಿಗೆಯಲ್ಲಿ ಬಹುತೇಕ ಪರವಾನಿಗೆದಾರರು ಈಗಾಗಲೇ ಇಹಲೋಕ ತ್ಯಜಿಸಿದ್ದಾರೆ. ಈಗ ಅವರ ಮಕ್ಕಳು ಮತ್ತು ಮೊಮ್ಮಕ್ಕಳು ಆ ಬಂದೂಕಿನ ಪರವಾನಿಗೆ ನವೀಕರಣಕ್ಕೆ ಈಗ ಅರ್ಜಿ ಸಲ್ಲಿಸಿರುತ್ತಾರೆ, ಆದರೆ ಯಾವ ಕೃಷಿ ರಕ್ಷಣೆಗಾಗಿ ಇವರು ಬಂದು ಪಡೆದಿರುತ್ತಾರೆಯೋ ಅದರಲ್ಲಿ ಬಹುತೇಕ ಕೃಷಿ ಭೂಮಿಗಳೇ ಈಗ ಇವರ ಬಳಿ ಇದ್ದಿರುವುದಿಲ್ಲ. ಹೆಚ್ಚಿನವರು ಕೃಷಿ ಭೂಮಿಯನ್ನು ಮಾರಾಟ ಮಾಡಿ, ಅಥವಾ ಕನ್ವರ್ಷನ್ ಮಾಡಿ ಕೈಗಾರಿಕೆಗಳು, ಶಾಪಿಂಗ್ ಮಾಲ್, ಲೇಔಟ್ ಇಂಥವುಗಳ ಉಪಯೋಗಕ್ಕೆ ಬಳಸಿಕೊಂಡಿದ್ದಾರೆ. ಬಹುತೇಕ ಕೃಷಿ ಭೂಮಿಗಳು ಬಹಳಷ್ಟು ವರ್ಷಗಳಿಂದ ಕೃಷಿ ಮಾಡದೇ ಹಡಿಲು ಬಿದ್ದಿದೆ, ಇನ್ನೂ ಕೆಲವು ಭೂಮಿಗಳು ರಬ್ಬರ್, ಅಡಿಕೆ ಮುಂತಾದ ವಾಣಿಜ್ಯ ಬೆಳೆಗಳನ್ನು ಬೆಳೆಯುವ, ಕೆಲವು ರೆಸಾರ್ಟ್ ಗಳಾಗಿ ಮಾರ್ಪಾಡು ಮಾಡಿದ್ದಾಗಿದೆ. ಜಿಲ್ಲೆಯ ಸುಳ್ಯ ಒಂದು ತಾಲೂಕನ್ನೇ ಗಮನಿಸುತ್ತಾ ಹೋದರೆ 21 ಸಾವಿರ ಕುಟುಂಬಗಳು ವಾಸಿಸುವ ಸುಳ್ಯದಲ್ಲಿ 4500 ಬಂದೂಕು ಪರವಾನಿಗೆ ನೀಡಲಾಗಿದೆ.

ಈ ಪರವಾನಿಗೆದಾರರಲ್ಲಿ ಬಹುತೇಕ ಜನರಲ್ಲಿ ಕೃಷಿ ಭೂಮಿಯೇ ಇಲ್ಲ. ಈ ಬಂದೂಕುಗಳನ್ನು ಕಾಡುಪ್ರಾಣಿಗಳ ಕಳ್ಳ ಬೇಟೆ ಮಾಡಲು ಬಳಸಲಾಗುತ್ತಿದ್ದು 4,500 ಬಂದೂಕುಗಳಲ್ಲಿ ಪ್ರತಿನಿತ್ಯ ಒಂದು ಪ್ರತಿಶತ ಬಂದೂಕು ಅಕ್ರಮ ಬೇಟೆಯಲ್ಲಿ ತೊಡಗಿಸಿದರೂ ಪ್ರತಿನಿತ್ಯ 45 ಕಾಡು ಪ್ರಾಣಿಗಳು ತಮ್ಮ ಜೀವ ಕಳೆದುಕೊಳ್ಳುವ ಸಾಧ್ಯತೆಗಳು ಇವೆ. ಈ ಕುರಿತು ಪ್ರತಿನಿತ್ಯ ನಾವು ಮಾಧ್ಯಮಗಳಲ್ಲಿ ಕಾಡುಪ್ರಾಣಿಗಳ ಅಕ್ರಮ ಬೇಟೆಯ ಕುರಿತು ಸುದ್ದಿ ನೋಡುತ್ತಿರುತ್ತೇವೆ, ಮತ್ತು ಸಾರ್ವಜನಿಕರಿಗೆ ನೀಡುವ ಮದ್ದು ಗುಂಡುಗಳಲ್ಲಿ ಯಾವುದೇ ಸರಕಾರಕ್ಕೆ ಲೆಕ್ಕ ತೋರಿಸುವ ಅಗತ್ಯ ಇಲ್ಲದಿರುವುದರಿಂದ ಒಂದು ಮಸಲ್ ಲೋಡಿಂಗ್ ಕೋವಿಗೆ ಪ್ರತಿ ತಿಂಗಳು 2 ಕೆಜಿ ಗನ್ ಪೌಡರ್ ಪಡೆದುಕೊಳ್ಳುವ ಮತ್ತು ಕೇಜಿಗಟ್ಟಲೆ ಬುಲೆಟ್ ಗಳನ್ನು ಖರೀದಿಸುವ ಸ್ವಾತಂತ್ರ್ಯ ಇರುವುದರಿಂದ ಇಷ್ಟೊಂದು ಪ್ರಮಾಣದ ಗನ್ ಪೌಡರ್ ಮತ್ತು ಬುಲೆಟ್ ಗಳನ್ನು ಯಾವುದಕ್ಕಾಗಿ ಬಳಸಿದೀರಿ, ಎಲ್ಲಿ ಬಳಸಿದ್ದೀರಿ ಎಂಬುದನ್ನು ಕೇಳುವ ಯಾವುದೇ ಪ್ರಾಧಿಕಾರ ಸದ್ಯ ನಮ್ಮ ರಾಜ್ಯದಲ್ಲಿ ಇಲ್ಲದಿರುವುದರಿಂದ ಹಲವು ಬಂದೂಕು ಪರವಾನಿಗೆ ನವೀಕರಿಸುವ ಮೊದಲು ಈ ಕೆಳಗಿನ ಅಂಶಗಳನ್ನು ಪರಿಶೀಲಿಸುವುದು ಹೆಚ್ಚು ಅಗತ್ಯ ಎಂದು ಶಶಿಧರ ಶೆಟ್ಟಿ ಬೊಟ್ಟುಮಾಡಿದ್ದರು.

ಇದೀಗ ಈ ಮನವಿಗೆ ತುರ್ತು ಸ್ಪಂದನೆ ನೀಡಿರುವ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು, ಪೊಲೀಸ್ ಆಯುಕ್ತರುಗಳಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !