ಮಗುವಿನ ಮೇಲೆ ತಾಯಿಗೆ ಮಾತ್ರ ವಿಶೇಷ ಹಕ್ಕು ಇರುವುದಿಲ್ಲ: ದೆಹಲಿ ಕೋರ್ಟ್‌ ಅಂಗಳದಲ್ಲಿ ಕ್ರಿಕೆಟಿಗ ಧವನ್​!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತದ ಕ್ರಿಕೆಟಿಗ ಶಿಖರ್ ಧವನ್​ ಮತ್ತು ಪತ್ನಿ ಆಯಿಷಾ ಮುಖರ್ಜಿ ದಾಂಪತ್ಯ ಬಿರುಕು ಇದೀಗ ಕೋರ್ಟ್​ ಅಂಗಳಕ್ಕೆ ಬಂದು ತಲುಪಿದೆ.
ಧವನ್​ ಕುಟುಂಬದ ಸಮಾರಂಭಕ್ಕೆ ತಮ್ಮ 9 ವರ್ಷದ ಮಗನನ್ನು ಭಾರತಕ್ಕೆ ಕರೆದುಕೊಂಡು ಬರುವಂತೆ ಆಯಿಷಾ ಮುಖರ್ಜಿ ಅವರಿಗೆ ದೆಹಲಿಯ ಪಟಿಯಾಲ ಹೌಸ್​ನ ಕೌಟುಂಬಿಕ ನ್ಯಾಯಾಲಯ ಆದೇಶಿಸಿದೆ.

ವಿಚ್ಛೇದನ ಮತ್ತು ಮಕ್ಕಳ ಪಾಲನೆಗೆ ಸಂಬಂಧಿಸಿದಂತೆ ಶಿಖರ್ ಧವನ್ ಮತ್ತು ಆಯಿಷಾ ಮುಖರ್ಜಿ​ ಇಬ್ಬರೂ ಭಾರತ ಮತ್ತು ಆಸ್ಟ್ರೇಲಿಯಾದಲ್ಲಿ ಕಾನೂನು ಪ್ರಕ್ರಿಯೆಗಳನ್ನು ನಡೆಸುತ್ತಿದ್ದಾರೆ. ಸದ್ಯ ಮಗು ಆಯಿಷಾ ಬಳಿ ಇದೆ. ಆದರೆ, ಮಗುವನ್ನು ಭಾರತಕ್ಕೆ ಕರೆತರಲು ಆಕೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಈ ಕುರಿತ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹರೀಶ್ ಕುಮಾರ್ ಮುಖರ್ಜಿ ಮಹತ್ವದ ಆದೇಶ ಪ್ರಕಟಿಸಿದರು. ಮಗುವಿನ ಮೇಲೆ ತಾಯಿಗೆ ಮಾತ್ರ ವಿಶೇಷ ಹಕ್ಕು ಇರುವುದಿಲ್ಲ ಎಂದೂ ನ್ಯಾಯಾಲಯ ತಿಳಿಸಿತು.

ಅರ್ಜಿ ವಿಚಾರಣೆ ಸಂದರ್ಭ 2020ರ ಆಗಸ್ಟ್​ನಿಂದ ಧವನ್ ಕುಟುಂಬ ಮಗುವನ್ನು ನೋಡಿಲ್ಲ. ಜೂನ್ 17ಕ್ಕೆ ಕುಟುಂಬ ಪುನರ್​ಮಿಲನ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ, ಮಗುವಿನ ಶಿಕ್ಷಣದ ಹಿತದೃಷ್ಟಿಯಿಂದ ಆಗ ಆಯಿಷಾ ಆಕ್ಷೇಪ ವ್ಯಕ್ತಪಡಿಸಿದ್ದರು. ಹೀಗಾಗಿ ಜುಲೈ 1ಕ್ಕೆ ಕಾರ್ಯಕ್ರಮ ಮುಂದೂಡಲಾಗಿತ್ತು. ಆದಾಗ್ಯೂ, ಹೊಸ ದಿನಾಂಕ ನಿಗದಿ ಮಾಡುವ ಮುನ್ನ ಸಂಪೂರ್ಣ ಕುಟುಂಬ ಸದಸ್ಯರನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ ಎಂದು ಮತ್ತೊಮ್ಮೆ ಆಕ್ಷೇಪಿಸಿದ್ದರು ಎಂದು ಧವನ್ ವಕೀಲರು ನ್ಯಾಯಾಲಯಕ್ಕೆ ವಿವರಿಸಿದರು.

ನ್ಯಾಯಾಧೀಶರು ಪ್ರತಿಕ್ರಿಯಿಸಿ, ಧವನ್ ಅವರ ಸಂಪೂರ್ಣ ಕುಟುಂಬವನ್ನು ಸಂಪರ್ಕಿಸದೇ ಇದ್ದರೂ ಅದು ಅಂತಹ ಗಂಭೀರ ಪರಿಣಾಮ ಬೀರುವುದಿಲ್ಲ. ಏಕೆಂದರೆ ಕೆಲವು ಕುಟುಂಬ ಸದಸ್ಯರು ಕೂಟಕ್ಕೆ ಹಾಜರಾಗಲು ಸಾಧ್ಯವಾಗದೇ ಇರಬಹುದು. 2020ರ ಆಗಸ್ಟ್​ನಿಂದ ಮಗು ಭಾರತಕ್ಕೆ ಭೇಟಿ ನೀಡಿಲ್ಲ. ಧವನ್ ಅವರ ಪೋಷಕರು ಮತ್ತು ಇತರ ಕುಟುಂಬ ಸದಸ್ಯರಿಗೆ ಮಗುವನ್ನು ಭೇಟಿ ಮಾಡಲು ಅವಕಾಶ ಸಿಕ್ಕಿಲ್ಲ. ಮಗುವಿನ ಶಾಲಾ ರಜೆ ಮತ್ತು ಅದು ಶಿಖರ್‌ ಧವನ್ ಜೊತೆ ಹೊಂದಿಕೊಳ್ಳುತ್ತಿರುವ ವಿಚಾರವನ್ನು ಪರಿಗಣಿಸಿದ ನ್ಯಾಯಾಧೀಶರು, ಮಗು ಭಾರತದಲ್ಲಿ ಕೆಲವು ದಿನಗಳನ್ನು ಕಳೆಯಲಿ ಎಂಬ ಅರ್ಜಿದಾರರ ಮನವಿ ಸೂಕ್ತವಾಗಿದೆ ಎಂದು ಹೇಳಿದರು.

ಇದೇ ವೇಳೆ, ಕುಟುಂಬದೊಳಗಿನ ಪರಿಸರವನ್ನು ಕಲುಷಿತಗೊಳಿಸುವ ಆರೋಪವನ್ನು ಇಬ್ಬರೂ ಹಂಚಿಕೊಳ್ಳಬೇಕಾಗುತ್ತದೆ. ಒಬ್ಬರು ಕಳವಳ ವ್ಯಕ್ತಪಡಿಸಿದಾಗ ಮತ್ತು ಇನ್ನೊಬ್ಬರು ಅದನ್ನು ಮೆಚ್ಚದೇ ಇದ್ದಾಗ ಅಥವಾ ಗಮನ ಹರಿಸದಿದ್ದಾಗ ವಿವಾದ ಉಂಟಾಗುತ್ತದೆ. ಆದರೆ, ಮಗುವಿನ ಮೇಲೆ ತಾಯಿಗೆ ಮಾತ್ರ ಹಕ್ಕಿಲ್ಲ. ಮಗುವಿಗೆ ಆತ ಕೆಟ್ಟ ತಂದೆ ಅಲ್ಲದೇ ಇರುವಾಗ ತನ್ನ ಸ್ವಂತ ಮಗುವನ್ನು ಭೇಟಿಯಾಗುವುದನ್ನು ಏಕೆ ವಿರೋಧಿಸಲಾಗುತ್ತಿದೆ’ ಎಂದು ಪ್ರಶ್ನಿಸಿದರು.

ಅರ್ಜಿಯಲ್ಲಿ ಧವನ್ ಮಗುವಿನ ಶಾಶ್ವತ ಪಾಲನೆಯನ್ನು ಕೋರುತ್ತಿಲ್ಲ. ಆದರೆ, ಆಯಿಷಾ ಮುಖರ್ಜಿ ತಮ್ಮ ವೆಚ್ಚದಲ್ಲಿ ಮಗುವನ್ನು ಕೆಲವು ದಿನಗಳವರೆಗೆ ಭಾರತದಲ್ಲಿ ಹೊಂದಲು ಬಯಸುತ್ತಿದ್ದಾರೆ ಎಂದು ಕೋರ್ಟ್ ಸ್ಪಷ್ಟಪಡಿಸಿತು. ವೆಚ್ಚದ ಬಗ್ಗೆ ಆಕೆಯ ಆಕ್ಷೇಪಣೆಯನ್ನು ಸಮರ್ಥಿಸಬಹುದು ಮತ್ತು ಈ ಆಕ್ಷೇಪಣೆಯು ಸರಿಯಾಗಿರಬಹುದು. ಆದರೆ, ಮಗುವನ್ನು ಕರೆತರಲು ಆಕೆಗೆ ಇಷ್ಟ ಇಲ್ಲವಿಲ್ಲ ಎಂಬುದನ್ನು ಸಮರ್ಥಿಸಲಾಗದು ಎಂದು ಕೋರ್ಟ್‌ ಹೇಳಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!