ಪಾಕ್ ಉಗ್ರರ ಮೇಲೆ ‘ಆಪರೇಷನ್ ಸಿಂದೂರ’ ಕಾರ್ಯಾಚರಣೆ ನಿರಂತರ: ಕೇಂದ್ರ ಸಚಿವ ಕಿರಣ್ ರಿಜಿಜು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಕ್ ಉಗ್ರರ ನೆಲೆಗಳ ಮೇಲೆ ‘ಆಪರೇಷನ್ ಸಿಂದೂರ’ ಕಾರ್ಯಾಚರಣೆ ನಿರಂತರವಾದದ್ದು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಹೇಳಿದರು.

ಇಂದು ನಡೆದ ಸರ್ವಪಕ್ಷ ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಆಪರೇಷನ್ ಸಿಂದೂರ’ ದಲ್ಲಿ ಕನಿಷ್ಠ 100 ಭಯೋತ್ಪಾದಕರ ಹತ್ಯೆಯಾಗಿದೆ. ಈ ಕಾರ್ಯಾಚರಣೆ ಹೀಗೆ ಮುಂದುವರಿಯಲಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ತಿಳಿಸಿದ್ದು, ಅವರು ಹೇಳಿದಂತೆ ಇದು ಒಂದು ನಿರಂತರ ಕಾರ್ಯಾಚರಣೆಯಾಗಿದೆ. ಸಶಸ್ತ್ರ ಪಡೆಗಳು ನಡೆಸಿದ ದಾಳಿಯಲ್ಲಿ ಪಾಕಿಸ್ತಾನದ 9 ಭಯೋತ್ಪಾದಕ ಅಡಗುತಾಣಗಳು ಧ್ವಂಸಗೊಂಡಿವೆ. ಪಾಕಿಸ್ತಾನದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಪ್ರತಿಪಕ್ಷಗಳು ಭರವಸೆ ನೀಡಿವೆ ಎಂದು ತಿಳಿಸಿದರು.

ಸದ್ಯ ದೇಶವು ಎದುರಿಸುತ್ತಿರುವ ಪ್ರಮುಖ ಸವಾಲನ್ನು ಗುರುತಿಸಿ ಪ್ರತಿಯೊಬ್ಬ ನಾಯಕರು ಜವಾಬ್ದಾರಿ ಮತ್ತು ಪ್ರಬುದ್ಧತೆಯಿಂದ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಪ್ರತೀಕಾರ ತೀರಿಸಿಕೊಂಡರೆ ಭಾರತ ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ. ಆದರೆ ಈಗಾಗಲೇ ಆಪರೇಷನ್ ಸಿಂದೂರಕ್ಕೆ ಪ್ರತಿಯಾಗಿ, ಪಾಕಿಸ್ತಾನಿ ಸೇನೆಯು ಪೂಂಚ್-ರಾಜೌರಿ ಪ್ರದೇಶದ ನಿಯಂತ್ರಣ ರೇಖೆಯುದ್ದಕ್ಕೂ ಫಿರಂಗಿ ದಾಳಿ ನಡೆಸಿ 15 ನಾಗರಿಕರನ್ನು ಬಲಿಪಡೆದುಕೊಂಡಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!