ಹೊಸದಿಗಂತ ವರದಿ, ಚಿತ್ರದುರ್ಗ:
ಉಡುಪಿಯಲ್ಲಿ ೬ ಮಂದಿ ಮಾತ್ರ ಹಿಜಾಬ್ ಧರಿಸಿದ್ದರು ಇನ್ನುಳಿದ ೯೦ ಜನ ಸಮವಸ್ತ್ರ ಧರಿಸಿದ್ದರು. ಮಕ್ಕಳಿಗೆ ಸಮವಸ್ತ್ರದ ಬಗ್ಗೆ ಎಲ್ಲರೂ ತಿಳಿ ಹೇಳಬೇಕಿತ್ತು. ಕಾಂಗ್ರೆಸ್ ನಾಯಕರು, ಮುಸ್ಲಿಂ ನಾಯಕರು ಇಂತಹ ಪ್ರಯತ್ನ ಮಾಡಿದ್ದರೆ, ದೇಶದಲ್ಲಿ ಈ ಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. ಬೇಕೆಂದೇ ವ್ಯವಸ್ಥಿತವಾಗಿ ನಡೆಸುತ್ತಿರುವ ಸಂಚು ಇದು ಎಂದು ಸಚಿವ ಕೆ.ಎಸ್.ಈಶ್ವರಪ್ಪ ಕಿಡಿಕಾರಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ಮಕ್ಕಳು ಸಮವಸ್ತ್ರ ಧರಿಸಿ ಎಂದು ಈಗಲೂ ನಾನು ಹೇಳುತ್ತೇನೆ. ಕ್ರಿಶ್ಚಿಯನ್ ಶಾಲೆಗಳಲ್ಲಿ ಹಿಜಾಬ್ ಧರಿಸಲು ಅವಕಾಶ ಇಲ್ಲ. ಆದರೆ ಓಟಿನ ಮೇಲೆ ಕಣ್ಣಿಟ್ಟು ಮಾಡುತ್ತಿರುವ ಕುತಂತ್ರ ಇದಾಗಿದೆ ಎಂದು ಆರೋಪಿಸಿದರು.
ಸಿದ್ದರಾಮಯ್ಯಗೆ ಕೇಸರಿ ಪೇಟ ಹಾಕಲು ಹೋದಾಗ ತೆಗೆದು ಬಿಸಾಕಿದ್ದಾರೆ. ಆಗ ಸಿದ್ದರಾಮಯ್ಯ ಅವರ ತಲೆಯಲ್ಲಿ ಸಗಣಿ ಇತ್ತೇನೋ ಗೊತ್ತಿಲ್ಲ. ಕೇಸರಿ ತ್ಯಾಗ, ಬಲಿದಾನದ ಸಂಕೇತ, ರಾಷ್ಟ್ರ ದ್ವಜದ ಮೇಲೆ ಗೌರವ ಇದೆ. ಡಿಕೆಶಿ ರಾಷ್ಟ್ರದ್ವಜವನ್ನು ರಾಜಕೀಯ ದುರುಪಯೋಗ ಮಾಡಿದ್ದಾರೆ. ಶಿವಮೊಗ್ಗದಲ್ಲಿ ರಾಷ್ಟ್ರದ ಧ್ವಜ ಇಳಿಸಿ ಕೇಸರಿ ದ್ವಜ ಹಾರಿಸಿದ್ದಾರೆ ಎಂದು ಹೇಳಿ ಡಿಕೆಶಿ ಅಪಮಾನ ಮಾಡಿದ್ದಾರೆ ಎಂದರು.
ಸಚಿವರ ಪುತ್ರ ಕೇಸರಿ ಶಾಲು ವಿತಹರಿಸಿದ್ದಾರೆಂಬ ಡಿಕೆಶಿ ಹೇಳಿಕೆ ವಿಚಾರ. ೫೦ ಲಕ್ಷ ಕೇಸರಿ ಶಾಲು ಸೂರತ್‌ಯಿಂದ ಬಂದಿವೆ ಎಂದು ಡಿಕೆಶಿ ಹೇಳಿದ್ದಾರೆ. ಅಯೋಧ್ಯೆಯ ಶ್ರೀರಾಮನ ಪ್ಯಾಕ್ಟರಿಗೆ ನಾವು ಆರ್ಡರ್ ನೀಡಿದ್ದು, ಅಯೋಧ್ಯೆಯಿಂದ ಹನುಮಾನ್ ಟ್ರಾನ್ಸ್ಸ್‌ಪೋರ್ಟ್‌ನಲ್ಲಿ ರಾಜ್ಯಕ್ಕೆ ಶಾಲು ಬಂದಿವೆ. ರಾಜ್ಯದ ಕೋಟಿ, ಕೋಟಿ ಯುವಕರ ಹೃದಯದಲ್ಲಿ ಕೇಸರಿ ತಲುಪಿದೆ. ಇದು ಎಲ್ಲಿಂದ ಬಂತು ಎಂದು ಡಿ.ಕೆ.ಶಿವಕುಮಾರ್‌ಗೆ ಗೊತ್ತಿಲ್ಲ ಎಂದರು.
ಡಿ.ಕೆ.ಶಿವಕುಮಾರ್ ಅವರಿಗೆ ಕನಕಪುರ ಬಂಡೆ ಪ್ಯಾಕ್ಟರಿ ಇದೆ. ಬಂಡೆ ಕದ್ದು ಬೇರೆ ರಾಜ್ಯಕ್ಕೆ ಕಳಿಸುವ ಟ್ರಾನ್ಸ್‌ಪೋರ್ಟ್ ಇದೆ. ಅಯೋಧ್ಯೆಯ ಕೇಸರಿ ಶಾಲು ದೇಶ ಭಕ್ತಿಯ ಜಾಗೃತಿ ಮೂಡಿಸಿದೆ. ಇದನ್ನು ತಡೆಯಲು ಆಗುತ್ತಿಲ್ಲ. ಅದೇ ಶಾಲುಗಳು ವಿಧ್ಯಾರ್ಥಿಗಳಿಗೆ ದೇಶದ ಪ್ರತಿಯೊಬ್ಬರಿಗೂ ತಲುಪಿದೆ ಎಂದು ತಿಳಿಸಿದರು.