ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಭಾರತವನ್ನು ವಿರೋಧಿಸುವ ಮನಸ್ಥಿತಿಯು ಊಳಿಗಮಾನ್ಯ ಮನಸ್ಥಿತಿ ಎಂದು ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ವಿಶ್ಲೇಷಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಭಾರತ ಹೆಸರನ್ನು ಟೀಕಿಸುವವರು ವಸಾಹತುಶಾಹಿ ಮನಸ್ಥಿತಿಯಿಂದ ಹೊರಕ್ಕೆ ಬಂದಿಲ್ಲ ಎಂಬುದನ್ನು ಅದು ತೋರಿಸುತ್ತದೆ. ಮಹಾತ್ಮ ಗಾಂಧಿಯವರು ಬಹುಶಃ ಇದೇ ಕಾರಣಕ್ಕೆ ಕಾಂಗ್ರೆಸ್ಸನ್ನು ವಿಸರ್ಜಿಸಿ ಎಂದು ಕರೆಕೊಟ್ಟಿದ್ದರು ಎಂದು ಅಭಿಪ್ರಾಯಪಟ್ಟರು.
ಮುಂದೆ ಅಧ್ವಾನ ಮಾಡಬಹುದು; ಆಗ ಕಾಂಗ್ರೆಸ್ಸಿಗೇ ಕೆಟ್ಟ ಹೆಸರು ಬರಬಹುದು. ಕಾಂಗ್ರೆಸ್ ನೇತೃತ್ವ ವಹಿಸಿದ್ದ ತಮ್ಮ ವ್ಯಕ್ತಿತ್ವಕ್ಕೂ ಅಪಮೌಲ್ಯ ಆಗಬಹುದೆಂಬ ಕಾರಣಕ್ಕೆ ಅವರು ಕಾಂಗ್ರೆಸ್ ವಿಸರ್ಜನೆಗೆ ಕರೆಕೊಟ್ಟಿದ್ದರು ಎಂದರು. ಅದೆಷ್ಟೋ ಲಕ್ಷ ಜನ ಕಾಂಗ್ರೆಸ್ ಕಾರ್ಯಕರ್ತರು ಹೆಮ್ಮೆಯಿಂದ ಭಾರತ್ ಮಾತಾ ಕೀ ಜೈ ಎಂದು ಕೂಗಿ ಲಾಠಿಯಿಂದ ಏಟು ತಿಂದಿದ್ದನ್ನು ಇಂದಿನ ಕಾಂಗ್ರೆಸ್ಸಿಗರು ನೆನಪಿಸಿಕೊಳ್ಳಬೇಕು. ಅದನ್ನೂ ಮರೆತಿರುವುದು ಇವತ್ತಿನ ಕಾಂಗ್ರೆಸ್ಸಿನ ದುರದೃಷ್ಟದ ಸಂಗತಿ ಎಂದು ತಿಳಿಸಿದರು. ಭಾರತ ಎಂಬ ಹೆಸರು, ಸನಾತನ ಧರ್ಮಕ್ಕೆ ಸಂಬಂಧಿಸಿ ಇದೀಗ ಚರ್ಚೆ ನಡೆಯುತ್ತಿದೆ ಎಂದ ಅವರು, ಭಾರತ ಎಂಬುದು ಇವತ್ತು ನಿನ್ನೆ ಇಟ್ಟ ಹೆಸರಲ್ಲ. ಸಾವಿರಾರು ವರ್ಷಗಳಿಂದ ನಮ್ಮ ದೇಶವನ್ನು ನಾವು ಭಾರತವೆಂದು ಗುರುತಿಸುತ್ತೇವೆ.
ಭರತ ಚಕ್ರವರ್ತಿಯಿಂದ ಭಾರತದ ಹೆಸರು ಬಂತೆಂದು ನಾವು ಪರಿಭಾವಿಸುತ್ತೇವೆ ಎಂದು ತಿಳಿಸಿದರು. ಭಾ ಎಂದರೆ ಬೆಳಕು. ಆ ಕಾರಣಕ್ಕೋಸ್ಕರ ಜ್ಞಾನವನ್ನು ನೀಡುವ ದೇಶ ಭಾರತ ಎಂಬ ಪರಿಭಾವನೆಯನ್ನೂ ಅವರು ಮುಂದಿಟ್ಟರು. ಚಿಕ್ಕಂದಿನಲ್ಲಿ ಕಲಿತ ‘ಸಿಂಹನೊಡನಾಡುತ್ತ ಹಲ್ಲುಗಳನೆಣಿಸಿದವ ಹಾಲ್ಗಲ್ಲ ಹಸುಳೆ ಇವ ನಮ್ಮ ಭರತ ಬಲ್ಲೆಯಾ ಕಿರಾತ ಅವನ ಛಲಬಲಭರಿತ ಒಂದೊಂದು ಜೀವವೂ ಭರತ ಸಹಜಾತ ಎಂಬ ಹಾಡನ್ನು ಉಲ್ಲೇಖಿಸಿದ ಅವರು, ಭರತ ಸಿಂಹದ ಜೊತೆ ಆಟವಾಡಿ ಅದರ ಹಲ್ಲುಗಳನ್ನು ಎಣಿಸಿದವ ಎಂಬ ವಿಶ್ಲೇಷಿಸಿದರು. ಇದು ಭಾರತೀಯರ ಶೌರ್ಯ ಪರಿಚಯಿಸಿದ ಹಾಡು ಎಂದರು.
ವಿಷ್ಣು ಪುರಾಣದಲ್ಲೂ ಭಾರತದ ಕುರಿತು ಉಲ್ಲೇಖವಿದೆ ಎಂದು ವಿವರಿಸಿದರು. ಇವತ್ತು ನಿನ್ನೆ ಇಟ್ಟ ಹೆಸರು ಇದಲ್ಲ; ಬಂಕಿಂಚಂದ್ರ ಚಟರ್ಜಿ ಅವರ ಬರಹ, ಮಹಾತ್ಮ ಗಾಂಧೀಜಿ ಅವರ ಜೀವನಚರಿತ್ರೆಯನ್ನೂ ಅವರು ಉಲ್ಲೇಖಿಸಿದರು.
‘ಇಂಡಿಯ’ವನ್ನು ನಾವು ವ್ಯಾವಹಾರಿಕವಾಗಿ ಅರಗಿಸಿಕೊಂಡಿದ್ದೇವೆ ಎಂದರಲ್ಲದೆ ಅಗಸ್ತ್ಯ- ವಾತಾಪಿ ಕಥೆಯನ್ನೂ ಮುಂದಿಟ್ಟರು. ವಾತಾಪಿ ಜೀರ್ಣೋಭವ ಎಂಬಂತೆ ನಾವು ಹಲವು ಸಂಗತಿ ಅರಗಿಸಿಕೊಂಡಿದ್ದೇವೆ ಎಂದರು. ಪರ್ಶಿಯನ್ನರು ಬಂದಾಗ ನಮಗೆ ಅಸ್ತಿತ್ವದ ಪ್ರಶ್ನೆ ಬಂತು. ಪರಕೀಯರ ಆಕ್ರಮಣ ಮಾಡಿದಾಗ ಸಿಂಧೂ ಇದ್ದುದು ಹಿಂದೂ ಆಯಿತು. ಗ್ರೀಕರು ಇದನ್ನು ಇಂಡಸ್ ಎಂದರು. ಬ್ರಿಟಿಷರ ಬಾಯಲ್ಲಿ ಅದು ಇಂಡಿಯ ಆಗಿದೆ. ಅದಕ್ಕೆ ಸಹಸ್ರಮಾನಗಳ ಇತಿಹಾಸ ಇಲ್ಲ. ವಸಾಹತುಶಾಹಿ ಬ್ರಿಟಿಷರ ಆಳ್ವಿಕೆ ಬಳಿಕ ಈ ಹೆಸರು ಬಂದಿದೆ ಎಂದು ವಿಶ್ಲೇಷಿಸಿದರು.
ಭಾರತ ಎಂದರೆ ನಮ್ಮ ಅಸ್ತಿತ್ವ; ನಮ್ಮ ಅಸ್ಮಿತೆ. ಅಸ್ಮಿತೆ, ಅಸ್ತಿತ್ವ ಕಳಕೊಂಡರೆ ನಾವ್ಯಾರು ಎಂದು ಪ್ರಶ್ನಿಸಿದರು. ವ್ಯಕ್ತಿ ಆತ್ಮಹೀನನಾದರೆ ಏನೆಂದು ಕರೆಯುತ್ತೇವೋ ಹಾಗೇ ಆಗುತ್ತದೆ. ಅದನ್ನು ಯೋಚಿಸಿ ಎಂದು ತಿಳಿಸಿದರು.
ಸನಾತನ ಧರ್ಮೀಯರು ಬಹುಸಂಖ್ಯಾತರಿರುವ ದೇಶದಲ್ಲಿ ಹುಟ್ಟಿದ್ದು ಅವರ ಅದೃಷ್ಟ ಎಂದು ನುಡಿದರು. ಬೇರೆ ನಂಬಿಕೆಗಳ ಬಗ್ಗೆ ಅಸಹಿಷ್ಣುತೆ ಇರುವ ಮಧ್ಯಪ್ರಾಚ್ಯ ದೇಶಗಳಲ್ಲಿ ಹುಟ್ಟಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು ಎಂದು ಕೇಳಿದರು. ಅಲ್ಲಿನ ಮತ, ಸಂಪ್ರದಾಯದ ಕುರಿತು ಪ್ರಶ್ನಿಸಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು? ಯಾರೋ ತಲೆಗೆ ಬೆಲೆ ಕಟ್ಟಿರುವುದು ನೋಡಿದೆ. ನಮ್ಮ ದೇಶದಲ್ಲಿ ಅಷ್ಟು ಸುಲಭವಾಗಿ ಯಾರನ್ನೂ ಕೊಲ್ಲುವುದಿಲ್ಲ; ನಮ್ಮದು ಸಹಿಷ್ಣ್ಣು ದೇಶ, ಅದೃಷ್ಟವಂತ ನೀನು ಎಂದು ನುಡಿದರು. ಇಲ್ಲದಿದ್ದರೆ ನಿನ್ನ ಖೇಲ್ ಖತಂ ಆಗುತ್ತಿತ್ತು ಎಂದರು.
ಧರ್ಮ ಎಂದರೆ ವಿಕಸನಗೊಂಡ ಜೀವನಮೌಲ್ಯ ಡಾ.ಪರಮೇಶ್ವರ್ ಅವರು ಹುಟ್ಟಿಸಿದ್ದು ಯಾರೆಂದು ಕೇಳಿದ್ದಾರೆ. ಸನಾತನ ಎಂದರೆ ಅದರ ಅರ್ಥ ಆದಿ ಮತ್ತು ಅಂತ್ಯ ಇಲ್ಲದೇ ಇರುವುದು. ಹಾಗಾಗಿ ಹುಟ್ಟಿಸಿದ್ದು ಎಂಬ ಪ್ರಶ್ನೆ ಬರುವುದಿಲ್ಲ. ಧರ್ಮ ಮತ್ತು ಮತಕ್ಕೆ ದೊಡ್ಡ ವ್ಯತ್ಯಾಸ ಇದೆ. ಮತಗಳಿಗೆ ವಾರೀಸುದಾರಿಕೆ ಇದೆ. ಹುಟ್ಟಿದ ದಿನಾಂಕ ಇದೆ. ಹುಟ್ಟಿಸಿದ ಅಪ್ಪ ಯಾರೆಂದು ಇದೆ. ಧರ್ಮಕ್ಕೆ ಅದಿಲ್ಲ ಎಂದು ಸಿ.ಟಿ.ರವಿ ಅವರು ವಿವರಿಸಿದರು.
ಜಾತ್ಯತೀತತೆ ಹೆಸರು ಹೇಳಿಕೊಂಡು ಸನಾತನ ಧರ್ಮಕ್ಕೆ ಅಪಮಾನ ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ. ಅನಿಷ್ಟಗಳು, ಕೆಟ್ಟದ್ದು ಹೋಗಲೇಬೇಕು. ಆದರೆ, ನನ್ನ ದೇಶ, ನನ್ನ ಪರಂಪರೆ ಎಷ್ಟು ಮತಿ ಇದೆಯೋ ಅಷ್ಟು ಮತಗಳಿಗೆ ಅವಕಾಶ ಕೊಟ್ಟಿದೆ. ಹಾಗಾಗಿ ನೂರಾರು ಮತಗಳು ಇಲ್ಲಿ ಹುಟ್ಟಿವೆ. ತಾರತಮ್ಯಗಳನ್ನು ಹೋಗಲಾಡಿಸಲು ನಮ್ಮ ಬದ್ಧತೆ ಇದೆ ಎಂದು ತಿಳಿಸಿದರು.
ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಎಂ.ಜಿ. ಮಹೇಶ್, ರಾಜ್ಯ ಕಾರ್ಯದರ್ಶಿ ಜಗದೀಶ್ ಹಿರೇಮನಿ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.