ಹೊಸದಿಗಂತ ವರದಿ ಅಂಕೋಲಾ:
ಉತ್ತರ ಕನ್ನಡ ರೈಲ್ವೇ ಸೇವಾ ಸಮಿತಿ, ಕುಂದಾಪುರ ರೈಲ್ವೇ ಸಮಿತಿಗಳು ಹಾಗೂ ಮೈಸೂರು ಸಂಸದ ಪ್ರತಾಪ್ ಸಿಂಹರ ಅವಿರತ ಪ್ರಯತ್ನದಿಂದ ಉತ್ತರ ಕನ್ನಡ ಜಿಲ್ಲೆಗೆ ಮತ್ತೊಂದು ಮೈಸೂರು-ಬೆಂಗಳೂರು ಮಾರ್ಗದ ಹೊಸ ರೈಲು ಲಭ್ಯವಾಗಿದೆ.
16585 ಸಂಖ್ಯೆಯ ಬೆಂಗಳೂರು-ಮೈಸೂರು-ಮಂಗಳೂರು ರೈಲನ್ನು ಮುರ್ಡೇಶ್ವರದವರೆಗೆ ವಿಸ್ತರಣೆ ಮಾಡಿ ಭಾರತೀಯ ರೈಲ್ವೇ ಆದೇಶ ಹೊರಡಿಸಿದೆ. ಈ ಮೂಲಕ ಕಳೆದ ಮೂರು ವರ್ಷಗಳ ಹಿಂದೆ ನಿಂತಿದ್ದ ಮೈಸೂರು ಸಂಪರ್ಕವು ಮರು ಸ್ಥಾಪನೆಯಾದಂತಾಗಿದೆ .
ಕರಾವಳಿ ಬೆಂಗಳೂರಿನ ಜೀವನಾಡಿ ರೈಲಾದ ಪಂಚಗಂಗಾ ಎಕ್ಸ್ ಪ್ರೆಸ್ ರೈಲಿನಲ್ಲಿ ಸೀಟು ಸಿಗುವುದಿಲ್ಲ ಎಂಬುದು ಒಂದು ದೂರಾಗಿದ್ದರೆ, ಪಂಚಗಂಗಾ ಬೆಂಗಳೂರಿನಿಂದ ತೀರಾ ಬೇಗನೆ ಹೊರಡುವುದರಿಂದ ತಡ ರಾತ್ರಿ ಹೊರಡುವವರಿಗೆ ಸೀಟು ಸಿಗುವುದಿಲ್ಲ ಎಂಬುದು ಇನ್ನೊಂದು ಕಾಳಜಿಯಾಗಿತ್ತು. ಈ ಎಲ್ಲಾ ಬೇಡಿಕೆಗಳಿಗೂ ಇದೀಗ ತೆರೆ ಬಿದ್ದಿದ್ದು, ಪ್ರತಿ ನಿತ್ಯ ರಾತ್ರಿ ಎಂಟುಕಾಲಿಗೆ ಬೈಯ್ಯಪ್ಪನಹಳ್ಳಿ ಬಿಟ್ಟು ಒಂಬತ್ತಕ್ಕೆ ಮೆಜೆಸ್ಟಿಕ್ ತಲುಪಿ
ಬೆಳಿಗ್ಗೆ ಹನ್ನೆರಡರ ಸುಮಾರಿಗೆ ಮುರುಡೇಶ್ವರ ತಲುಪಲಿದೆ. ಅದೇ ರೀತಿ ಮಧ್ಯಾಹ್ನ ಎರಡಕ್ಕೆ ಮುರುಡೇಶ್ವರದಿಂದ ಹೊರಟು ಬೆಂಗಳೂರಿಗೆ ಬೆಳಿಗ್ಗೆ ಆರಕ್ಕೆ ತಲುಪಲಿದೆ .
ಕರಾವಳಿ ಮೈಸೂರು ನಡುವೆ ರೈಲು ಸಂಪರ್ಕಕ್ಕಾಗಿ ಸಂಸದ ಪ್ರತಾಪ್ ಸಿಂಹ ಕಳೆದ ಎರಡು ವರ್ಷಗಳಲ್ಲಿ ಹಲವಾರು ಬಾರಿ ಸಚಿವಾಲಯ ಮತ್ತು ಇಲಾಖೆಗಳ ಬೇಟಿ ನೀಡಿದ್ದರು .ಮೈಸೂರು ಸಂಸದ ಪ್ರತಾಪ್ ಸಿಂಹ ಹಂತ ಹಂತವಾಗಿ ಈ ರೈಲನ್ನು ಮುರುಡೇಶ್ವರದವರೆಗೆ ವಿಸ್ತರಿಸಲು ಇದ್ದ ತಡೆಗಳನ್ನು ನಿವಾರಿಸುತ್ತ ಕೊನೆಗೂ ವಿಸ್ತರಣೆಗೆ ರೈಲ್ವೇ ಸಚಿವರ ಒಪ್ಪಿಗೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ .
ಸಂಸದ ಪ್ರತಾಪ್ ಸಿಂಹರಿಗೆ ಪೂರಕವಾಗಿ ಕೆಲಸ ಮಾಡಿದ ಕುಂದಾಪುರ ರೈಲ್ವೇ ಸಮಿತಿ ಹಾಗು ಉತ್ತರ ಕನ್ನಡ ರೈಲ್ವೇ ಸೇವಾ ಸಮಿತಿಯ ರಾಜೀವ್ ಗಾಂವ್ಕರ್, ಸತತವಾಗಿ ರೈಲ್ವೇ ಅಧಿಕಾರಿಗಳು ಮತ್ತು ರೈಲ್ವೆ ಮಂಡಳಿಗೆ ಬೇಟಿ ಕೊಡುತ್ತಾ ಮೈಸೂರು ಮುರುಡೇಶ್ವರ ರೈಲಿನ ವಿಸ್ತರಣೆಯ ಪ್ರಸ್ತಾಪವನ್ನು ರೈಲ್ವೇಮಂಡಳಿ ದೆಹಲಿಗೆ ತಲುಪಿಸಿ ಈ ಮೂಲಕ ಹೊಸ ಬೆಂಗಳೂರು ರೈಲು ಪಡೆಯಲು ಯಶಸ್ವಿಯಾಗಿದ್ದಾರೆ.
ಈ ಹಿಂದೆ ಓಡುತಿದ್ದ ಮೈಸೂರು ಮಾರ್ಗದ ಬೆಂಗಳೂರು ರೈಲನ್ನು ಮೂರು ವರ್ಷದ ಹಿಂದೆ ಕೊಂಕಣ ರೈಲ್ವೆ ರದ್ದು ಮಾಡಿದ್ದ ದಿನದಿಂದ ಆರಂಭವಾಗಿದ್ದ ಮೌನ ಹೋರಾಟಕ್ಕೆ ಇದೀಗ ರೈಲ್ವೇ ಸಂಘಟನೆಗಳು ಜಯದ ಅಂತ್ಯ ಕಂಡಿದೆ. ಈ ಹಿನ್ನೆಲೆಯಲ್ಲಿ ಮೈಸೂರು ಗ್ರಾಹಕ ಪರಿಷತ್ ಸದಸ್ಯ ಶ್ರೀ ಯೋಗೇಂದ್ರರ ಸ್ವಾಮಿವರ ಕೊಡುಗೆಯನ್ನೂ ಸ್ಮರಿಸಿದ್ದಾರೆ.
ಸಂಸದ ಪ್ರತಾಪ್ ಸಿಂಹ ಸಾಧನೆಗೆ ಕರಾವಳಿ ಜಿಲ್ಲೆಗಳಾದ್ಯಂತ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದ್ದು , ಸಂಸದ ಪ್ರತಾಪ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹೊಗಳಿಕೆಯ ಮಳೆಯನ್ನೇ ಸಾರ್ವಜನಿಕರು ಸುರಿಸಿದ್ದಾರೆ .