November 1, 2026
Sunday, November 1, 2026
spot_img

ದೆಹಲಿಯಲ್ಲಿ ರಾಜಕೀಯ ಹೈಡ್ರಾಮಾ: ‘ಇಂಡಿಯಾ’ ಮೈತ್ರಿಕೂಟದ ‘ಚಲೋ ದಿಲ್ಲಿ’ ಪ್ರತಿಭಟನೆಗೆ ಬಿಜೆಪಿ ಕೌಂಟರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ತೀವ್ರ ರಾಜಕೀಯ ಸಂಘರ್ಷ ಏರ್ಪಟ್ಟಿದೆ. ಕೇಂದ್ರ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳ ‘ಇಂಡಿಯಾ’ ಮೈತ್ರಿಕೂಟ ಬೃಹತ್ ಪ್ರತಿಭಟನಾ ರ‍್ಯಾಲಿ ಹಮ್ಮಿಕೊಂಡಿದ್ದರೆ, ಅದಕ್ಕೆ ಪ್ರತಿಯಾಗಿ ಆಡಳಿತಾರೂಢ ಬಿಜೆಪಿಯು ದೆಹಲಿಯ ಬೀದಿಗಳಲ್ಲಿ ಪ್ರತಿರೋಧ ಮೆರವಣಿಗೆ ನಡೆಸುತ್ತಿದೆ. ಇದರಿಂದಾಗಿ ರಾಷ್ಟ್ರ ರಾಜಧಾನಿಯಲ್ಲಿ ರಾಜಕೀಯ ಕಾವು ತಾರಕಕ್ಕೇರಿದೆ.

 ‘ಚಲೋ ದಿಲ್ಲಿ’ಗೆ ರಾಹುಲ್ ಗಾಂಧಿ ಕರೆ

ಮತದಾರರ ಪಟ್ಟಿಯಲ್ಲಿ ದೊಡ್ಡ ಮಟ್ಟದ ಅಕ್ರಮಗಳು ನಡೆದಿವೆ ಎಂದು ಆರೋಪಿಸಿರುವ ವಿರೋಧ ಪಕ್ಷಗಳು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿವೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಮಿಂಟೋ ರೋಡ್-ಕನಾಟ್ ಪ್ಲೇಸ್ ಜಂಕ್ಷನ್‌ನಿಂದ ಮಧ್ಯಾಹ್ನ ಬೃಹತ್ ‘ಚಲೋ ದಿಲ್ಲಿ’ ಪಾದಯಾತ್ರೆ ಆರಂಭವಾಗಲಿದೆ. ಜನಾಂದೋಲನಕ್ಕೆ ಕರೆ ನೀಡಿರುವ ರಾಹುಲ್ ಗಾಂಧಿ, “ದೆಹಲಿ ಸಿದ್ಧರಾಗಿ! ವೋಟ್ ಉಳಿಸಿ, ದೇಶ ಉಳಿಸಿ. ನಾವೆಲ್ಲರೂ ಒಟ್ಟಾಗಿ ಹೆಜ್ಜೆ ಹಾಕೋಣ, ರಾಮಲೀಲಾ ಮೈದಾನದಲ್ಲಿ ಭೇಟಿಯಾಗೋಣ” ಎಂದು ಎಕ್ಸ್ ನಲ್ಲಿ ಜನರಿಗೆ ಮುಕ್ತ ಆಹ್ವಾನ ನೀಡಿದ್ದಾರೆ. ಈ ಪಾದಯಾತ್ರೆಯು ದೆಹಲಿಯ ಐತಿಹಾಸಿಕ ರಾಮಲೀಲಾ ಮೈದಾನದಲ್ಲಿ ಕೊನೆಗೊಳ್ಳಲಿದ್ದು, ಅಲ್ಲಿ ಮೈತ್ರಿಕೂಟದ ಬೃಹತ್ ಜಂಟಿ ಸಮಾವೇಶ ನಡೆಯಲಿದೆ.

1984ರ ಸಿಖ್ ದಂಗೆ ಅಸ್ತ್ರ ಹಿಡಿದು ಬಿಜೆಪಿ ತಿರುಗೇಟು

‘ಇಂಡಿಯಾ’ ಮೈತ್ರಿಕೂಟದ ಪ್ರತಿಭಟನೆಗೆ ಕೌಂಟರ್ ಕೊಡಲು ಸಜ್ಜಾಗಿರುವ ಬಿಜೆಪಿ, ಪಶ್ಚಿಮ ದೆಹಲಿಯಲ್ಲಿ ‘ಲೋಕತಂತ್ರ ಬಚಾವೋ, ಅರಾಜಕತಾ ಹಟಾವೋ’ ಹೆಸರಿನಲ್ಲಿ ಪ್ರತಿರೋಧ ರ‍್ಯಾಲಿ ಹಮ್ಮಿಕೊಂಡಿದೆ. 1984ರ ಸಿಖ್ ವಿರೋಧಿ ದಂಗೆಯ ಕರಾಳ ದಿನಗಳ ನೆನಪಿನಲ್ಲಿ ಈ ರ‍್ಯಾಲಿ ಆಯೋಜಿಸಲಾಗಿದ್ದು, ಸಿಖ್ ಸಮುದಾಯದವರು ಹೆಚ್ಚಾಗಿರುವ ಹರಿ ನಗರದಿಂದ ಆರಂಭವಾಗಿ ತಿಲಕ್ ನಗರ ಮೆಟ್ರೋ ನಿಲ್ದಾಣದವರೆಗೆ ಸಾಗಲಿದೆ. ಕಾಂಗ್ರೆಸ್ ಪಕ್ಷವು ಬೇಕೆಂದೇ ದಂಗೆಯ ವಾರ್ಷಿಕೋತ್ಸವದಂದೇ ತನ್ನ ರಾಜಕೀಯ ರ‍್ಯಾಲಿ ಹಮ್ಮಿಕೊಳ್ಳುವ ಮೂಲಕ ಸಂತ್ರಸ್ತರ ನೋವನ್ನು ಕಡೆಗಣಿಸಿದೆ ಎಂದು ಬಿಜೆಪಿ ತೀವ್ರವಾಗಿ ವಾಗ್ದಾಳಿ ನಡೆಸಿದೆ.

ಇದನ್ನೂ ಓದಿ:

ದೆಹಲಿಯಲ್ಲಿ ಹೈ ಅಲರ್ಟ್

ರಾಜಕೀಯ ಪಕ್ಷಗಳ ಜಿದ್ದಾಜಿದ್ದಿನ ಹಿನ್ನೆಲೆಯಲ್ಲಿ ದೆಹಲಿಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ದೆಹಲಿ ಪೊಲೀಸ್, ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ (CAPF), ಸಿಆರ್‌ಪಿಎಫ್ ಮತ್ತು ರಾಪಿಡ್ ಆಕ್ಷನ್ ಫೋರ್ಸ್ (RAF) ಸೇರಿದಂತೆ ಸುಮಾರು 10,000ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ದೆಹಲಿಯ ಪ್ರಮುಖ ರಸ್ತೆಗಳು ಮತ್ತು ರಾಮಲೀಲಾ ಮೈದಾನದ ಸುತ್ತಮುತ್ತ ನಿಯೋಜಿಸಲಾಗಿದೆ. ಹಲವು ಕಡೆಗಳಲ್ಲಿ ಸಂಚಾರ ಮಾರ್ಗಗಳನ್ನು ಬದಲಾವಣೆ ಮಾಡಲಾಗಿದ್ದು, ವಾಹನ ಸವಾರರ ತಪಾಸಣೆಯನ್ನು ತೀವ್ರಗೊಳಿಸಲಾಗಿದೆ.

Must Read

Skip to toolbar