ಇಸ್ರೇಲ್-ಹಮಾಸ್ ಯುದ್ಧ: ವಿಶ್ವಸಂಸ್ಥೆಯ ಮತದಾನದಿಂದ ದೂರ ಉಳಿದ ಭಾರತ, ವಿಪಕ್ಷಗಳಿಂದ ಟೀಕೆ

 ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಯುದ್ಧ 22 ನೇ ದಿನಕ್ಕೆ ಕಾಲಿಟ್ಟಿದ್ದು,  ಇಲ್ಲಿಯವರೆಗೆ ಎರಡೂ ಕಡೆಯಿಂದ 8,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಈ ಸಂಘರ್ಷ ತಡೆಯುವ ಸಲುವಾಗಿ ಜೋರ್ಡಾನ್, ಕದನ ವಿರಾಮಕ್ಕಾಗಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಗೆ ಕರಡು ನಿರ್ಣಯ ಸಲ್ಲಿಸಿತು. ಈ ಕರಡು ನಿರ್ಣಯದ ಮೇಲಿನ ಮತದಾನದಿಂದ ಭಾರತ ದೂರ ಉಳಿದಿದ್ದು, ಇದೀಗ ಭಾರತದ ವಿದೇಶಾಂಗ ನೀತಿಯ ಬಗ್ಗೆ ವಿಪಕ್ಷಗಳು ಟೀಕೆ ಮಾಡುತ್ತಿವೆ.

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಟ್ವೀಟ್ ಮಾಡಿದ್ದು, ʻಒಂದು ಕಣ್ಣು ಇಡೀ ಜಗತ್ತನ್ನು ಕುರುಡನನ್ನಾಗಿ ಮಾಡುತ್ತದೆ ಎಂಬ ಮಹಾತ್ಮ ಗಾಂಧಿ ಹೇಳಿಯನ್ನು ಉಲ್ಲೇಖಿಸಿ, ಗಾಜಾದಲ್ಲಿ ಕದನ ವಿರಾಮಕ್ಕಾಗಿ ವಿಶ್ವಸಂಸ್ಥೆಯ ಮತದಾನದಿಂದ  ನಮ್ಮ ದೇಶವು ದೂರ ಉಳಿದಿರುವುದು ನನಗೆ ಆಘಾತ ತಂದಿದೆ. ಇದು ದುಃಖಕರವಾಗಿದೆʼ ಎಂದು ಪೋಸ್ಟ್‌ ಮಾಡಿದ್ದಾರೆ.

ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದೇನು?
ಇದೇ ವಿಚಾರವಾಗಿ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್ ಕೇಂದ್ರ ಮೇಲೆ ಟೀಕಾಪ್ರಹಾರ ಮಾಡಿದ್ದಾರೆ. ಕೇಂದ್ರ ಸರ್ಕಾರ ಗೊಂದಲದಲ್ಲಿ ಸಿಲುಕಿದ್ದು, ಪರಿಹಾರ ಕಂಡುಕೊಳ್ಳಲು ಹೆಣಗಾಡುತ್ತಿದೆ ಎಂದರು. ಪ್ಯಾಲೆಸ್ತೀನ್‌ಗೆ ಬೆಂಬಲ ನೀಡುವುದು ಭಾರತದ ನೀತಿಯೇ ಹೊರತು ಇಸ್ರೇಲ್‌ಗೆ ಅಲ್ಲ ಎಂದರು.

ಭಾರತ ಸರ್ಕಾರದ ವಿರುದ್ಧ ಓವೈಸಿ ಟೀಕೆ
ತಕ್ಷಣದ ಕದನ ವಿರಾಮಕ್ಕೆ ಕರೆ ನೀಡುವ ಜೋರ್ಡಾನ್ ತಂದ ಕರಡಿನ ಮೇಲಿನ ಮತದಾನದಲ್ಲಿ ಭಾರತ ಸರ್ಕಾರ ಭಾಗವಹಿಸಿಲ್ಲ. ಭಾರತ ಸರ್ಕಾರ ಮತದಾನದಲ್ಲಿ ಭಾಗವಹಿಸದಿರುವುದು ಅಚ್ಚರಿ ತಂದಿದೆ. ಇದು ರಾಜಕೀಯ ವಿಚಾರವಲ್ಲ ಮಾನವೀಯ ವಿಚಾರ ಎಂದು ಓವೈಸಿ ಹೇಳಿದ್ದಾರೆ.

ಪ್ರಸ್ತಾವನೆಯ ಪರವಾಗಿ 120 ಮತಗಳು
ಈ ಯುಎನ್ ನಿರ್ಣಯದ ಪರವಾಗಿ 120 ಮತಗಳು ಮತ್ತು ಅದರ ವಿರುದ್ಧ ಕೇವಲ 14 ಮತಗಳು ಬಂದವು. ಅದೇ ಸಮಯದಲ್ಲಿ, ಭಾರತ, ಕೆನಡಾ, ಜರ್ಮನಿ ಮತ್ತು ಬ್ರಿಟನ್ ಸೇರಿದಂತೆ 45 ದೇಶಗಳು ಈ ಮತದಾನ ಪ್ರಕ್ರಿಯೆಯಿಂದ ದೂರ ಉಳಿದಿವೆ.

ಈಗಾಗಲೇ ಎರಡೂ ದೇಶಗಳ ನಡುವಿನ ಯುದ್ಧದ ಬಗ್ಗೆ ಸ್ಪಷ್ಟನೆ ನೀಡಿರುವ ಭಾರತ, ದೇಶವು ಎಂದಿಗೂ ಭಯೋತ್ಪಾದನೆಯ ಪರವಾಗಿರುವುದಿಲ್ಲ, ಬೆಂಬಲಿಸುವುದೂ ಇಲ್ಲ ಎಂದು ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!