ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರಪತಿ ಚುನಾವಣೆಗೆ ಎನ್‌ಡಿಎ ವಿರುದ್ಧ ಜಂಟಿ ಕಾರ್ಯತಂತ್ರ ರೂಪಿಸಲು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿಜೆಪಿಯೇತರ ಪಕ್ಷಗಳ ಸಭೆ ಕರೆದಿದ್ದು ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯ ವಿರುದ್ಧವಾಗಿ ಸಾಮಾನ್ಯ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ.
ದೆಹಲಿಯ ಕಾನ್ಸ್ಟಿಟ್ಯೂಶನ್ ಕ್ಲಬ್ ಆಫ್ ಇಂಡಿಯಾದಲ್ಲಿ ಬುಧವಾರ ಕಾಂಗ್ರೆಸ್, ಸಿಪಿಐ, ಸಿಪಿಐ(ಎಂ), ಸಿಪಿಐಎಂಎಲ್, ಆರ್‌ಎಸ್‌ಪಿ, ಶಿವಸೇನೆ, ಎನ್‌ಸಿಪಿ, ಆರ್‌ಜೆಡಿ, ಎಸ್‌ಪಿ, ನ್ಯಾಷನಲ್ ಕಾನ್ಫರೆನ್ಸ್, ಪಿಡಿಪಿ, ಜೆಡಿ(ಎಸ್), ಡಿಎಂಕೆ, ಆರ್‌ಎಲ್‌ಡಿ, ಐಯುಎಂಎಲ್ ಮತ್ತು ಜೆಎಂಎಂ ಸೇರಿದಂತೆ ಒಟ್ಟೂ 16 ಪಕ್ಷಗಳು ಈ ಸಭೆಯಲ್ಲಿ ಭಾಗವಹಿಸಿದ್ದವು.
ರಾಷ್ಟ್ರಪತಿ ಅಭ್ಯರ್ಥಿಯಾಗಿ ಶರದ್ ಪವಾರ್ ಹೆಸರು ಮತ್ತೊಮ್ಮೆ ಪ್ರಸ್ತಾಪವಾದರೂ ಅದನ್ನು ಪವಾರ್ ತಿರಸ್ಕರಿಸಿದ್ದಾರೆ ಎನ್ನಲಾಗಿದೆ. ಸಭೆಯ ನಂತರ ಪ್ರತಿಕ್ರಿಯೆ ನೀಡಿರುವ ಮಮತಾ ಬ್ಯಾನರ್ಜಿ “ಸಭೆಯಲ್ಲಿ ಹಲವು ಪಕ್ಷಗಳು ಸೇರಿವೆ, ಹಲವಾರು ತಿಂಗಳುಗಳ ನಂತರ ಮತ್ತೆ ನಾವು ಒಟ್ಟಿಗೇ ಕುಳಿತು ಸಮಾಲೋಚನೆ ನಡೆಸಿದ್ದೇವೆ. ಒಬ್ಬ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡಲು ನಿರ್ಧರಿಸಿದ್ದೇವೆ ಇತರ ಎಲ್ಲಾ ಪಕ್ಷಗಳು ಅವರನ್ನು ಬೆಂಬಲಿಸಲು ಒಪ್ಪಿಗೆ ಸೂಚಿಸಿವೆ ” ಎಂದಿದ್ದಾರೆ.
ಮೂಲಗಳ ಪ್ರಕಾರ, ರಾಷ್ಟ್ರಪತಿ ಚುನಾವಣೆಗೆ ವಿರೋಧ ಪಕ್ಷದ ಅಭ್ಯರ್ಥಿಗಳಾಗಿ ಫಾರೂಕ್ ಅಬ್ದುಲ್ಲಾ ಮತ್ತು ಗೋಪಾಲಕೃಷ್ಣ ಗಾಂಧಿ ಅವರ ಹೆಸರನ್ನು ಮಮತಾ ಬ್ಯಾನರ್ಜಿ ಸೂಚಿಸಿದ್ದಾರೆ ಎನ್ನಲಾಗಿದೆ.