ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಗಾರು ಅಧಿವೇಶನದ ಪ್ರಾರಂಭದ ದಿನವು ರಾಷ್ಟ್ರಪತಿ ಚುನಾವಣೆಯಲ್ಲಿ ಅಂತ್ಯವಾಗುತ್ತಿದ್ದಂತೆ ಪ್ರತಿಪಕ್ಷಗಳು ಪ್ರತಿಭಟನೆಯಲ್ಲಿ ತೊಡಗಿವೆ. ಎರಡನೇ ದಿನದ ಆರಂಭದಲ್ಲೇ “ಅಧಿಕ ಹಣದುಬ್ಬರ, ನಿರಂತರ ಬೆಲೆ ಏರಿಕೆ ಸಾಮಾನ್ಯ ನಾಗರಿಕರ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ” ಎಂಬ ಬ್ಯಾನರ್ ಹಿಡಿದ ಪ್ರತಿಪಕ್ಷಗಳು ಸಂಸತ್ತಿನ ಆವರಣದಲ್ಲಿರುವ ಮಹಾತ್ಮ ಗಾಂಧೀಜಿಯವರ ಪ್ರತಿಮೆ ಎದುರು ಧರಣಿ ನಡೆಸಿದರು.
ಅಗತ್ಯ ವಸ್ತುಗಳ ಬೆಲೆಯನ್ನು ಸರಕಾರ ಇಳಿಸಬೇಕು ಎಂದು ಆಗ್ರಹಿಸಿ ಘೋಷಣೆಗಳನ್ನು ಕೂಗಿದರು. ಮುಂಗಾರು ಅಧಿವೇಶನದ ಮೊದಲ ದಿನ ಉಭಯ ಸದನಗಳಲ್ಲಿ ಪ್ರತಿಪಕ್ಷಗಳ ಕೋಲಾಹಲದ ನಡುವೆ ಗದ್ದಲ ಮತ್ತು ಗೊಂದಲ ಉಂಟಾಯಿತು, ಕೆಲವೇ ಗಂಟೆಗಳಲ್ಲಿ ಅದನ್ನು ಮುಂದೂಡಲಾಯಿತು.
ಅಧಿವೇಶನ ಆರಂಭಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ‘ಫಲಪ್ರದ’ ಅಧಿವೇಶನಕ್ಕೆ ಸಹಕರಿಸುವಂತೆ ನಾಯಕರಿಗೆ ಮನವಿ ಮಾಡಿದ್ದರು. “ನಾವು ಯಾವಾಗಲೂ ಸದನವನ್ನು ಸಂವಾದದ ಸಮರ್ಥ ಮಾಧ್ಯಮ, ಯಾತ್ರಾ ಸ್ಥಳವೆಂದು ಪರಿಗಣಿಸುತ್ತೇವೆ. ಎಲ್ಲಿ ಮುಕ್ತ ಮನಸ್ಸಿನಿಂದ ಸಂವಾದವಿದೆಯೋ, ಅಲ್ಲಿ ತೀವ್ರ ಚರ್ಚೆಗಳು ನಡೆಯುತ್ತವೆ, ಅಗತ್ಯವಿದ್ದರೆ, ಟೀಕೆಗಳೂ ಇರುತ್ತವೆ ಮತ್ತು ವಿಷಯಗಳ ಉತ್ತಮ ವಿಶ್ಲೇಷಣೆಯ ಮೂಲಕ ನೀತಿಗಳು ಮತ್ತು ನಿರ್ಧಾರಗಳಿಗೆ ಅತ್ಯಂತ ಸಕಾರಾತ್ಮಕ ಕೊಡುಗೆಯನ್ನು ನೀಡಬಹುದು ಎಂದು ಪ್ರಧಾನಿ ಮೋದಿ ಹೇಳಿದರು.
ಅಧಿವೇಶನದ ನಂತರ ರಾಜ್ಯಸಭೆಯಲ್ಲಿ ಕಾಂಗ್ರೆಸ್ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸೋಮವಾರ 2ನೇ ದಿನದಂದು ಪ್ರತಿಭಟನೆ ಘೋಷಿಸಿದರು. “ನಾಳೆ ಇದರ ವಿರುದ್ಧ ಹೋರಾಟ ಮಾಡುತ್ತೇವೆ, ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸುತ್ತೇವೆ, ಸದನದ ಒಳಗೆ ಹಾಗೂ ಹೊರಗೆ ಬೆಲೆ ಏರಿಕೆ, ಜಿಎಸ್‌ಟಿ ಏರಿಕೆ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದ್ದರು.
ಅದರಂತೆ ಇಂದು ಗಾಂದಿ ಪ್ರತಿಭಟನೆಯ ಎದುರಲ್ಲಿ ಪ್ರತಿಪಕ್ಷಗಳು ಪ್ರತಿಭಟನೆ ನಡೆಸಿವೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವರು ಭಾಗಿಯಾಗಿದ್ದು ಬೆಲೆ ಏರಿಕೆ ವಿರುದ್ಧ ಬ್ಯಾನರ್ ಹಿಡಿದು ಪ್ರತಿಭಟಿಸುತ್ತಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.