ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಅನಧಿಕೃತ ರ‍್ಯಾಪಿಡೋ ಬೈಕ್ ಟ್ಯಾಕ್ಸಿ (Rapido bike taxi) ನಿಷೇಧಕ್ಕೆ ಆಗ್ರಹಿಸಿ ಇಂದು (ಸೋಮವಾರ) ಸಂಪೂರ್ಣ ಆಟೋ ಚಾಲಕರು ಪ್ರತಿಭಟನೆಗೆ ಕರೆ ಕೊಟ್ಟಿದ್ದಾರೆ.
ಹೀಗಾಗಿ ಭಾನುವಾರ ಮಧ್ಯರಾತ್ರಿ 12 ರಿಂದ 24 ಗಂಟೆಗಳ ಕಾಲ ನಗರದಾದ್ಯಂತ ಆಟೋ ಸಂಚಾರ ಸ್ಥಗಿತಗೊಳ್ಳಲಿದೆ.
ಸೋಮವಾರ ಬೆಳಗ್ಗೆ 11 ಗಂಟೆಗೆ ಕಪ್ಪುಪಟ್ಟಿ ಧರಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ರೇಸ್ ಕೋರ್ಸ್ ನಿವಾಸಕ್ಕೆ ಮುತ್ತಿಗೆ ಹಾಕಲು ಆಟೋ ಚಾಲಕರು ತೀರ್ಮಾನಿಸಿದ್ದಾರೆ. ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡದ ಹಿನ್ನೆಲೆಯಲ್ಲಿ ಮುಷ್ಕರಕ್ಕೆ ಆಟೋ ಚಾಲಕರು ಮುಂದಾಗಿದ್ದಾರೆ.
ಬೈಕ್ ಟ್ಯಾಕ್ಸಿಯಿಂದ ನಮಗೆ ಬಾಡಿಗೆ ಸಿಗುತ್ತಿಲ್ಲ. ನಮ್ಮ ಜೀವನಕ್ಕೆ ತೊಂದರೆಯಾಗಿದೆ. ಯೆಲ್ಲೋ ಬೋರ್ಡ್ ಹಾಕಿಕೊಂಡು ಬೈಕ್ ಟ್ಯಾಕ್ಸಿ ಸೇವೆ ನೀಡಲಿ ಎಂದು ಆಟೋ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಟೋ ರಿಕ್ಷಾದವರು ಕಾನೂನಾತ್ಮಕವಾಗಿ ಸರ್ಕಾರಕ್ಕೆ ತೆರಿಗೆ ಕಟ್ಟಿ ಆಟೋ ನಡೆಸುತ್ತಿದ್ದೇವೆ. ಆದರೆ ವಾಮಮಾರ್ಗದಿಂದ ಕಾನೂನುಬಾಹಿರವಾಗಿ ಬೈಕ್ ಟ್ಯಾಕ್ಸಿಗಳು ಸೇವೆ ನೀಡುತ್ತಿರುವುದಕ್ಕೆ ಕಡಿವಾಣ ಹಾಕಿ. ಹಾಗೆಯೇ ಇಂತಹ ಬೈಕ್ ಸೇವೆ ನೀಡುತ್ತಿರುವ ಕಂಪನಿಗಳ ಮೇಲೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಪಟ್ಟು ಹಿಡಿದಿದ್ದಾರೆ.
2 ಲಕ್ಷದ 10 ಸಾವಿರ ಆಟೋಗಳ ಸಂಚಾರ ಬಂದ್ ಆಗುವ ಸಾಧ್ಯತೆಯಿದೆ. ಓಲಾ (Ola), ಊಬರ್‌ನಲ್ಲೂ (Ubar) ಆಟೋ ಸೇವೆ ಲಭ್ಯವಿರುವುದಿಲ್ಲ. ಇಂದು ಆಟೋದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಸ್ವಲ್ಪ ಕಷ್ಟವಾಗಬಹುದು. ಈ ಮುಷ್ಕರದಲ್ಲಿ 21ಆಟೋ ಸಂಘನೆಗಳಿದ್ದು, ಎಲ್ಲರೂ ಬಂದ್‌ನಲ್ಲಿ ಭಾಗಿಯಾಗಲಿದ್ದಾರೆ.