ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊಪ್ಪಳ ನಗರಕ್ಕೆ ಹೊಂದಿಕೊಂಡು ಬಲ್ಡೋಟಾ ಸ್ಟೀಲ್ ಕಾರ್ಖಾನೆ ಸ್ಥಾಪನೆಗೆ ವಿರೋಧಿಸಿ ಸೋಮವಾರ (ಫೆ.24) ಕೊಪ್ಪಳ ಬಂದ್ ಕರೆ ನೀಡಲಾಗಿದೆ. ಈ ವೇಳೆ ತಾಲೂಕು ಕ್ರೀಡಾಂಗಣದಲ್ಲಿ ಸಾರ್ವಜನಿಕ ಸಭೆಯಲ್ಲಿ ಕೊಪ್ಪಳದ ಸುಪ್ರಸಿದ್ಧ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಕಣ್ಣೀರು ಹಾಕಿದ ಘಟನೆ ನಡೆಯಿತು.
ಕೊಪ್ಪಳದ ಕೈಗಾರಿಕಾ ಪ್ರದೇಶ ಹಾಲವರ್ತಿಯಲ್ಲಿ ಬಲ್ದೋಟಾ ಕಂಪನಿಯಿಂದ ಉಕ್ಕಿನ ಕಾರ್ಖಾನೆ ನಿರ್ಮಾಣ ಮಾಡಲಾಗುತ್ತಿದೆ. ಇದು 54 ಸಾವಿರ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗ್ತಿರೋ ರಾಜ್ಯದ ಎರಡನೇ ಅತಿ ದೊಡ್ಡ ಸ್ಟೀಲ್ ಕಾರ್ಖಾನೆ.ಜರ್ಮನ್ ತಂತ್ರಜ್ಞಾನವನ್ನು ಬಳಸಿ ಉಕ್ಕಿನ ಕಾರ್ಖಾನೆ ನಿರ್ಮಾಣ ಮಾಡಲಾಗುತ್ತಿದ್ದು, ಇದು 13 ದಶಲಕ್ಷ ಟನ್ ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದಿದೆ. ಈ ಕಾರ್ಖಾನೆ ನಿರ್ಮಾಣಕ್ಕೆ ಸರ್ಕಾರ ಈಗಾಗಲೇ ಸಹಿ ಹಾಕಿದೆ.
ಇತ್ತ ಕೊಪ್ಪಳದ ಕೈಗಾರಿಕಾ ಪ್ರದೇಶದಲ್ಲಿ 200ಕ್ಕೂ ಹೆಚ್ಚು ಸ್ಟೀಲ್ ಕಾರ್ಖಾನೆಗಳು ಇವೆ. ಕಾರ್ಖಾನೆಗಳ ಹೊಗೆಯಿಂದ ಇಲ್ಲಿನ ಗ್ರಾಮಸ್ಥರು ನಲುಗಿ ಹೋಗಿದ್ದಾರೆ. ಕಾರ್ಖಾನೆ ಹೊರಸೂಸುವ ಹೊಗೆ, ಧೂಳಿನಿಂದ ಪರಿಸರ ಕಲುಷಿತ ಆಗಿದೆ. ಗ್ರಾಮದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರಿದ್ದು, ರೈತರು ಬೆಳೆದ ಬೆಳೆಗಳಿಗೆ ಹಾನಿಯಾಗುತ್ತಿದೆ.ಹೀಗಾಗಿ ಬಲ್ದೋಟಾ ಕಂಪನಿಯ ಉಕ್ಕಿನ ಕಾರ್ಖಾನೆ ನಿರ್ಮಾಣಕ್ಕೆ ಜಿಲ್ಲೆಯ ಜನರಿಂದ ಭಾರೀ ವಿರೋಧ ವ್ಯಕ್ತವಾಗಿದೆ.
ಗಿಣಿಗೇರಾ, ಚಿಕ್ಕಬಗನಾಳ್, ಹಿರೇ ಬಗನಾಳ್, ಕಾಸನಕಂಡಿ, ಗೊಂಡಬಾಳ, ಹಾಲವರ್ತಿ ಕುಣಿಕೇರಿ ಗ್ರಾಮಗಳ ಜನರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ. ಜಿಲ್ಲಾಧಿಕಾರಿ ನಳಿನ್ ಅತುಲ್ ಅವರು ಇದು ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ್ದು ಅಂತಿರೋ ಡಿಸಿ ನಳಿನ್ ಅತುಲ್ ಅವರ ವಿರುದ್ಧ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಕಾರ್ಖಾನೆ ಹಠಾವೋ, ಕೊಪ್ಪಳ ಬಚಾವೋ
ಇಂದು ಸಭೆಯಲ್ಲಿ ಈಗಾಗಲೇ ಇರೋ ಅನೇಕ ಸ್ಟೀಲ್ ಪ್ಯಾಕ್ಟರಿಗಳಿಂದ ಸುತ್ತಮುತ್ತಲಿನ ಜನರ ಮೇಲೆ ಆಗುತ್ತಿರುವ ದುಷ್ಪರಿಣಾಮ ಬಗ್ಗೆ ವಿಡಿಯೋ ಪ್ರದರ್ಶನ ಮಾಡಲಾಯಿತು. ದೂಳು ಮತ್ತು ಹೊಗೆಯಿಂದ ಜನರು ಸಂಕಷ್ಟ ಪಡುತ್ತಿರುವ ದೃಶ್ಯಗಳನ್ನು ನೋಡುತ್ತಲೇ ಗವಿಮಠದ ಸ್ವಾಮೀಜಿ ಭಾವುಕರಾಗಿ ಕಣ್ಣೀರು ಹಾಕಿದರು.
ಬಳಿಕ ಸಭೆ ಉದ್ದೇಶಿಸಿ ಮಾತನಾಡಿದ ಸ್ವಾಮೀಜಿ, ಕೊಪ್ಪಳ ಸಾಂಸ್ಕೃತಿಕ ರಾಜಧಾನಿಯಾಗಿದೆ. ಆದರೆ, ಇದೀಗ ಕರಿ ಅರಳಿಯಂತಾಗಿದೆ. ಬಲ್ಡೋಟಾ ಸೇರಿದಂತೆ ಕೊಪ್ಪಳದಲ್ಲಿ ಯಾವುದೇ ಕಾರ್ಖಾನೆ ಆರಂಭಕ್ಕೆ ನನ್ನ ವಿರೋಧವಿದೆ ಎಂದು ಹೇಳಿದರು.
ದೇಶದ ಪ್ರಗತಿಗೆ ಕಾರ್ಖಾನೆಗಳು ಬೇಕು. ಆದರೆ, ಯಾವ ಭಾಗದಲ್ಲಿ ಎಷ್ಟು ಮುಖ್ಯ ಅಂತ ನೋಡಬೇಕು. ಕೊಪ್ಪಳ ತಾಲೂಕಿನಲ್ಲಿ 202 ಕಾರ್ಖಾನೆಗಳಿವೆ. ಬರೀ ಕಾರ್ಖಾನೆಗಳೇ ಇದ್ದರೇ ಜನ ಇರುವುದಾರು ಎಲ್ಲಿ? ಇದೇ ರೀತಿ ಕಾರ್ಖಾನೆ ಆರಂಭವಾದರೆ ಕೊಪ್ಪಳ ನರಕವಾಗುತ್ತದೆ. ತೊಟ್ಟಿಲಲ್ಲಿ ಹೋಗುವವರು ಕಡಿಮೆಯಾಗುತ್ತಾರೆ. ನರಕಕ್ಕೆ ಹೋಗುವವರ ಸಂಖ್ಯೆ ಹೆಚ್ಚಾಗುತ್ತದೆ. ಸದ್ಯ ಕೊಪ್ಪಳ ತಿಪ್ಪೆ ಆದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.