ಹೊಸದಿಗಂತ ವರದಿ, ಅಂಕೋಲಾ:
ತಾಲೂಕಿನ ಭಾವಿಕೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೇಣಿಯಲ್ಲಿ ಖಾಸಗಿ ವಾಣಿಜ್ಯ ಬಂದರು ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿ ಕಾರವಾರ ಮತ್ತು ಅಂಕೋಲಾ ತಾಲೂಕುಗಳ ವ್ಯಾಪ್ತಿಯ ಮೀನುಗಾರರು ಮಾರ್ಚ್ 12 ರಂದು ತಮ್ಮ ಬೋಟುಗಳು ಮತ್ತು ದೋಣಿ ಗಳೊಂದಿಗೆ ಕಡಲಿಗಿಳಿದು ಶಾಂತಿಯುತ ಪ್ರತಿಭಟನೆ ನಡೆಸಲಿದ್ದು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಪ್ರತಿಭಟನೆಗೆ ಅವಕಾಶ ಮಾಡಿಕೊಡಬೇಕು ಎಂದು ಕೇಣಿ ವಾಣಿಜ್ಯ ಬಂದರು ಯೋಜನೆ ವಿರೋಧಿ ಹೋರಾಟಗಾರರು ಮತ್ತು ಸರ್ವ ಸಮಾಜದ ನಾಗರಿಕರ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಮಾಡಲಾಗಿದೆ.
ವಾಣಿಜ್ಯ ಬಂದರು ನಿರ್ಮಾಣ ಯೋಜನೆಗೆ ಸಂಬಂಧಿಸಿದಂತೆ ಸಮುದ್ರದಲ್ಲಿ ಸರ್ವೆ ಕಾರ್ಯ ನಡೆಯುತ್ತಿದ್ದು ಫೆಬ್ರವರಿ 24 ರಿಂದ ಇದುವರೆಗೆ ಸ್ಥಳೀಯ ಮೀನುಗಾರರು ಮೀನುಗಾರಿಕೆಗೆ ತೆರಳಲು ಸಾಧ್ಯವಾಗುತ್ತಿಲ್ಲ, ಮೀನು ದೊರಕುವ ಸ್ಥಳದಲ್ಲಿ ಸರ್ವೆ ಕಾರ್ಯ ನಡೆಸುವ ಯಂತ್ರ ಬಂದು ನಿಂತಿದ್ದು15 ದಿನಗಳಿಂದ ಮೀನುಗಾರಿಕೆ ಸಾಧ್ಯವಾಗದೇ ಜೀವನ ನಿರ್ವಹಣೆಯ ಆಧಾರವನ್ನು ಕಳೆದುಕೊಂಡು ಮೀನುಗಾರರ ಕುಟುಂಬ ಹಸಿವಿನಲ್ಲೇ ಕಾಲ ಕಳೆಯುವಂತಾಗಿದೆ ಎಂದು ಮನವಿ ಮೂಲಕ ತಿಳಿಸಲಾಗಿದ್ದು ಮಾರ್ಚ್ 12 ರಂದು ಅಂಕೋಲಾ ತಾಲೂಕಿನ ಮಂಜಗುಣಿಯಿಂದ ಹಾರವಾಡದ ವರೆಗಿನ ಮತ್ತು ಕಾರವಾರ ತಾಲೂಕಿನ ಮುದಗಾದಿಂದ ಕಾರವಾರ ವರೆಗಿನ ಮೀನುಗಾರರು ತಮ್ಮ ಬೋಟುಗಳು ಮತ್ತು ಸಾಂಪ್ರದಾಯಿಕ ಬೋಟುಗಳ ಮೂಲಕ ಸರ್ವೇ ಯಂತ್ರದ 500 ಮೀಟರ್ ಅಂತರದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲಿದ್ದಾರೆ ಇದು ಮೀನುಗಾರರಿಗಾಗಿ ಮೀನುಗಾರರ ಐಕ್ಯತೆಯ ಹೋರಾಟವಾಗಿದ್ದು ಕಾನೂನು ಸುವ್ಯವಸ್ಥೆ ಕಾಪಾಡುವ ಜೊತೆಗೆ ನಡೆಯಲಿರುವ ಹೋರಾಟಕ್ಕೆ ಅವಕಾಶ ಮಾಡಿಕೊಡಬೇಕು ಕೇಣಿ ವಾಣಿಜ್ಯ ಬಂದರು ಯೋಜನೆ ಸರ್ವೆ ಕಾರ್ಯ ನಿಲ್ಲಿಸಿ ಮೀನುಗಾರಿಕೆಗೆ ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಲಾಗಿದೆ.
ಹೋರಾಟ ಸಮಿತಿಯ ಪ್ರಮುಖ ಶ್ರೀಕಾಂತ ದುರ್ಗೇಕರ, ಹುವಾ ಖಂಡೇಕರ್, ಸೂರಜ ಹರಿಕಂತ್ರ, ವೆಂಕಟೇಶ ದುರ್ಗೇಕರ, ಸಂಜೀವ ಬಲೇಗಾರ, ಚಂದ್ರಕಾಂತ ಹರಿಕಂತ್ರ, ನಿಲೇಶ ಹರಿಕಂತ್ರ ಜ್ಞಾನೇಶ್ವರ ಹರಿಕಂತ್ರ, ಗಿರೀಶ್ ಹರಿಕಂತ್ರ ಮೊದಲಾದವರು ಇದ್ದರು.