ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಇ-ಕಾಮರ್ಸ್ ವೇದಿಕೆಯು ವಿದೇಶಿಗರನ್ನು ಬೆರಗುಗೊಳಿಸಿದೆ. ಪ್ರಪಂಚದಾದ್ಯಂತದ ಪ್ರವಾಸಿಗರು ಇಂತಹ ಸೇವೆಗಳ ಅನುಕೂಲತೆಯನ್ನು ಶ್ಲಾಘಿಸಿದ್ದಾರೆ. ಇತ್ತೀಚೆಗೆ ದಕ್ಷಿಣ ದೆಹಲಿಗೆ ಬಂದಿದ್ದ ಅಮೆರಿಕದ ವ್ಯಕ್ತಿಯೊಬ್ಬರು ಕೇವಲ ಆರು ನಿಮಿಷಗಳಲ್ಲಿ ಬ್ಲಿಂಕಿಟ್ ಆರ್ಡರ್ ಪಡೆದ ಅನುಭವವನ್ನು ತಿಳಿಸಿದ್ದಾರೆ. ಇದರ ವಿಡಿಯೊ ವೈರಲ್ ಆಗಿದೆ.
ಅಮೆರಿಕ ನಿವಾಸಿ ಚಾರ್ಲಿ ಇವಾನ್ಸ್ ಇತ್ತೀಚೆಗೆ ದೆಹಲಿ ಆಗಮಿಸಿದ್ದರು. ಈ ವೇಳೆ ಬ್ಲಿಂಕ್‌ಇಟ್‌ನಿಂದ 6 ನಿಮಿಷದಲ್ಲಿ ಆರ್ಡರ್ ಪಡೆದುಕೊಂಡ ಅವರು ತಮ್ಮ ಅನುಭವವನ್ನು ಇನ್‌ಸ್ಟಾಗ್ರಾಂ ವಿಡಿಯೊ ಮೂಲಕ ತಿಳಿಸಿದ್ದಾರೆ. ಇವಾನ್ಸ್ ಬ್ಲಿಂಕ್ಇಟ್‌ನಲ್ಲಿ ನೀರಿನ ಬಾಟಲ್ ಮತ್ತು ಸ್ಕ್ರೂಡ್ರೈವರ್ ಆರ್ಡರ್ ಮಾಡಿದ್ದರು. ವೇಗವಾಗಿ ಬರುತ್ತದೆಯೇ ಎಂಬುದನ್ನು ಪರೀಕ್ಷಿಸಲು ಸಮಯವನ್ನು ರೆಕಾರ್ಡ್ ಮಾಡಿದ್ದರು.
ಸಂಜೆ 5:43ಕ್ಕೆ ವಿಡಿಯೊವನ್ನು ಪ್ರಾರಂಭಿಸಿದ್ದಾಗಿ, ಇವಾನ್ಸ್ ವಿವರಿಸಿದ್ದಾರೆ. ನಾನು ಬ್ಲಿಂಕ್‌ಇಟ್‌ನಲ್ಲಿ ಆರ್ಡರ್ ಮಾಡಿದ್ದೇನೆ. ಈ ಅಪ್ಲಿಕೇಶನ್ ಸೇವೆ ಎಷ್ಟು ವೇಗವಾಗಿದೆ ಎಂಬುದನ್ನು ನಾನು ನನ್ನ ಅಮೆರಿಕದ ಸ್ನೇಹಿತರಿಗೆ ತೋರಿಸುತ್ತಿದ್ದೇನೆ. ಇದು ಬಹಳ ತ್ವರಿತವಾಗಿದೆ. ಎಷ್ಟು ನಿಮಿಷದಲ್ಲಿ ಬ್ಲಿಂಕ್‌ಇಟ್ ಆರ್ಡರ್ ಬರುತ್ತದೆ ನೋಡೋಣ ಎಂದು ವಿವರಿಸಿದ್ದಾರೆ.
ಕೆಲವೇ ಕ್ಷಣಗಳಲ್ಲಿ ಆರ್ಡರ್ ಅವರ ಕೈ ಸೇರಿದೆ. ಇದರಿಂದ ಸಂತುಷ್ಟಗೊಂಡ ಇವಾನ್ಸ್ ಅಂತಿಮ ಸಮಯವನ್ನು ಬಹಿರಂಗಪಡಿಸಿದ್ದಾರೆ. ನಾನು ಆರ್ಡರ್ ಮಾಡಿದ ವಸ್ತು ಪಡೆದುಕೊಂಡಾಗ 5:49 ಆಗಿತ್ತು. ಅಂದರೆ 6 ನಿಮಿಷ ಎಂದೇ ಪರಿಗಣಿಸಬಹುದು. ನೀರಿನ ಬಾಟಲ್ ಮತ್ತು ಸ್ಕ್ರೂಡ್ರೈವರ್ ಸಮಯಕ್ಕೆ ಸರಿಯಾಗಿ ಕೈ ಸೇರಿದೆ. ಅವರ ಸೇವೆ ಅತ್ಯುತ್ತಮ ಎಂದು ಕರೆದಿದ್ದಾರೆ. ತಮ್ಮ ಪೋಸ್ಟ್‌ನ ಶೀರ್ಷಿಕೆಯಲ್ಲಿ ʼಬ್ಲಿಂಕ್‌ಇಟ್ ದೇವರುʼ ಎಂದು ಉಲ್ಲೇಖಿಸಿದ್ದಾರೆ.

