5.05 ಕೋಟಿ ರೂ.ಪಾವತಿಗೆ ಆದೇಶ: ನಿರ್ಲಕ್ಷಿಸಿದ ಉಪವಿಭಾಗಾಧಿಕಾರಿ ಕಚೇರಿಯ ಪೀಠೋಪಕರಗಳ ಜಪ್ತಿ

ಹೊಸದಿಗಂತ ವರದಿ,ಹಾವೇರಿ :

ರಸ್ತೆ ನಿರ್ಮಾಣಕ್ಕೆ ವಶಕ್ಕೆ ಪಡೆದುಕೊಂಡ ಜಮೀನಿಗೆ ಹಣ ನೀಡದ ಹಿನ್ನೆಲೆ ನ್ಯಾಯಾಲಯದ ಆದೇಶದಂತೆ ಹಾವೇರಿ ಉಪವಿಭಾಗಾಧಿಕಾರಿ ಕಚೇರಿಯ ಪೀಠೋಪಕರಗಳನ್ನು ಜಪ್ತಿ ಮಾಡಿದ ಘಟನೆ ಹಾವೇರಿ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ನಡೆದಿದೆ.

ಹಾವೇರಿಯ ಸ್ವಾತಂತ್ರ ಹೋರಾಟಗಾರ ಸಿದ್ದಪ್ಪ ಹೊಸಮನಿ ಕುಟುಂಬಕ್ಕೆ ಸೇರಿದ ೭ಗುಂಟೆ ಜಮೀನನ್ನ ೧೯೬೭ರಲ್ಲಿ ಸರ್ಕಾರ ವಶಪಡಿಸಿಕೊಂಡಿತ್ತು. ಹಾವೇರಿ ಎಪಿಎಂಸಿಯಿoದ ಗಣಜೂರುವರೆಗೆ ನಿರ್ಮಾಣವಾದ ರಸ್ತೆಗೆ ಹೊಸಮನಿ ಕುಟುಂಬದ ಜಮೀನು ಭೂಸ್ವಾಧೀನಪಡಿಸಿಕೊಂಡು ರಸ್ತೆ ನಿರ್ಮಿಸಲಾಗಿತ್ತು. ಹೊಸಮನಿ ಕುಟುಂಬ ಪರಿಹಾರಕ್ಕಾಗಿ ಅಲೆದಾಡಿದರೂ ಸೂಕ್ತ ಪರಿಹಾರ ಸಿಕ್ಕಿರಲಿಲ್ಲ.
ಆದರೆ ೨೦೦೬ರವರೆಗೂ ಕಾಯ್ದು ಪರಿಹಾರ ಬಾರದ ಹಿನ್ನೆಲೆಯಲ್ಲಿ ಹೊಸಮನಿ ಕುಟುಂಬ ಸದಸ್ಯರು ನ್ಯಾಯಾಲಯದ ಮೆಟ್ಟಿಲೇರಿದ್ದರು.

ಅಂದು ಹೆಚ್ಚುವರಿ ಹಿರಿಯ ವಿಭಾಗೀಯ ನ್ಯಾಯಾಲಯ ಗುಂಟೆಗೆ ೫ ೦ಸಾವಿರದಂತೆ ಏಳುಗುಂಟೆ ಜಮೀನಿಗೆ ಪರಿಹಾರ ನೀಡುವಂತೆ ಸೂಚಿಸಿ ಆದೇಶಿಸಿತ್ತು. ಆದರೆ ಭೂಮಿಯ ದರ ಕಡಿಮೆಯಾಯಿತು ಎಂದು ಹೊಸಮನಿ ಕುಟುಂಬ ಉನ್ನತ ನ್ಯಾಯಾಲಯಕ್ಕೆ ಮತ್ತೆ ಅರ್ಜಿ ಸಲ್ಲಿಸಿದ್ದರು.

ಆಗ ಸರ್ಕಾರದ ಪರವಾಗಿ ಹೈಕೋರ್ಟ್ ಮೊರೆಹೋಗಿ ಬೆಲೆ ಹೆಚ್ಚಳದ ಕುರಿತು ಪ್ರಶ್ನಿಸಲಾಗಿತ್ತು. ಈ ಕುರಿತು ಹೈಕೋರ್ಟ್ ವಿಚಾರಣೆ ನಡೆಸಿ, ಭೂಮಿ ಸ್ವಾಧೀನ ಪಡಿಸಿಕೊಂಡಾಗಿನಿoದ ಶೇ.೧೮ರ ಬಡ್ಡಿಯೊಂದಿಗೆ ರೂ.೫,೦೫,೩೨,೩೪೩ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿತ್ತು. ಇತ್ತೀಚೆಗೆ ಮಾ.೨ರಂದು ನ್ಯಾಯಾಲಯದ ಆದೇಶವನ್ನ ಉಪವಿಭಾಗಾಧಿಕಾರಿ ಕಚೇರಿಗೆ ತಿಳಿಸಲಾಗಿತ್ತು. ಆದರೆ ಪರಿಹಾರ ನೀಡಲು ಉಪವಿಭಾಗಾಧಿಕಾರಿ ವಿಫಲರಾದ ಕಾರಣ ಎಸಿ ಕಚೇರಿಯ ಪೀಠೋಪಕರಣಗಳ ಜಪ್ತಿಗೆ ಡಿಹೆಚ್‌ಆರ್ ಅಶೋಕ ನೀರಲಗಿ ಮುಂದಾದರು.

ಮುಂಜಾನೆ ಎಸಿ ಕಚೇರಿಗೆ ಆಗಮಿಸಿದ ಅವರು ಮತ್ತು ಕೋರ್ಟ್ ಸಿಬ್ಬಂದಿ ಕಚೇರಿಯ ಪೀಠೋಪಕರಣ ಕಂಪ್ಯೂಟರ್ ಸೇರಿದಂತೆ ವಿವಿಧ ಪರಿಕರಗಳನ್ನು ಜಪ್ತಿ ಮಾಡಿದರು. ಕಚೇರಿ ಸಿಬ್ಬಂದಿಯನ್ನ ಹೊರಗೆ ಕಳಿಸಿ, ಖುರ್ಚಿ, ಕಂಪ್ಯೂಟರ್, ಪ್ರಿಂಟರ್ ಸೇರಿದಂತೆ ವಿವಿಧ ವಿದ್ಯುನ್ಮಾನ್ ಯಂತ್ರಗಳನ್ನು ಜಪ್ತಿ ಮಾಡಿದರು.

ಈ ಕುರಿತು ಸ್ವಾತಂತ್ರ ಹೋರಾಟಗಾರ ಸಿದ್ದಪ್ಪ ಹೊಸಮನಿ ಕುಟುಂಬದ ಮಲ್ಲಿಕಾರ್ಜುನ ಹೊಸಮನಿ ಅವರು ಸೂಕ್ತ ಪರಿಹಾರ ನೀಡುವಂತೆ ನ್ಯಾಯಾಲಯಕ್ಕೆ ದೂರ ಸಲ್ಲಿಸಿದ್ದರು ಎಂಬುದನ್ನು ಸ್ಮರಿಸಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!