ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಂಗಾವತಿ ನಗರದ ಜುಲೈನಗರದಿಂದ ರಾಣಾ ಪ್ರತಾಪ್ ವೃತ್ತದವರೆಗೆ ಅಭಿವೃದ್ಧಿಪಡಿಸಿದ ರಸ್ತೆ ಮಧ್ಯೆ ಹಾಕಿರುವ ವಿದ್ಯುತ್ ಕಂಬಗಳ ತೆರವಿಗೆ ತಹಶೀಲ್ದಾರ್ ಆದೇಶಿಸಿದ್ದಾರೆ. ಅಷ್ಟೇ ಅಲ್ಲದೇ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ಸಂಸ್ಥೆ ವಿರುದ್ಧವೇ ಪ್ರಕರಣ ದಾಖಲಿಸಲು ಸೂಚಿಸಿದ್ದಾರೆ.
ವಿದ್ಯುತ್ ಕಂಬಳಲ್ಲಿ ಅಳವಡಿಸಿರುವ ಚಿತ್ರಗಳು ಐತಿಹಾಸಿಕ ಅಂಜನಾದ್ರಿ ಪರ್ವತದ ಮಾರ್ಗಸೂಚಿಗೆ ಅನುಕೂಲವಾಗಿವೆ. ಅಂಜನಾದ್ರಿಗೆ ಬರುವ ಭಕ್ತರಲ್ಲಿ ಧಾರ್ಮಿಕ ಭಕ್ತಿ ಉಂಟಾಗುವುದರಿಂದ ಇವುಗಳನ್ನು ಅಳವಡಿಸಲಾಗಿದೆ. ಇದರಿಂದ ಯಾರ ಭಾವನೆಗೂ ಧಕ್ಕೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅಯೋಧ್ಯೆ, ತಿರುಪತಿಯ ಮಾದರಿಯಲ್ಲಿ ಗಂಗಾವತಿ ಅಂಜನಾದ್ರಿ ಅಭಿವೃದ್ಧಿಯಾಗಬೇಕೆಂಬ ನಿಟ್ಟಿನಲ್ಲಿ ಮಹಾರಾಣಾ ಪ್ರತಾಪ್ ಸರ್ಕಲ್‌ನಿಂದ ಜುಲೈ ನಗರದವರೆಗೂ ತಿರುಪತಿ, ಅಯೋಧ್ಯೆಯಲ್ಲಿರುವಂತೆ ವಿದ್ಯುತ್ ಕಂಬಗಳನ್ನು ಹಾಕಲಾಗಿತ್ತು. ಆದರೆ ಇದು ಕೇವಲ ಒಂದು ಧರ್ಮದ ಸಂಕೇತವಾಗಿದೆ. ಇದರಿಂದ ಗಂಗಾವತಿ ನಗರದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ಆಗುತ್ತದೆ ಎನ್ನುವ ಆರೋಪ ಎದುರಾಗಿತ್ತು.