ಹೊಸದಿಗಂತ ವರದಿ, ದಾವಣಗೆರೆ:
ಮೈಕ್ರೋ ಫೈನಾನ್ಸ್ ದೌರ್ಜನ್ಯ, ದಬ್ಬಾಳಿಕೆ ತಡೆಗೆ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ತಂದಿದ್ದರೂ, ಸಾಲದ ಕಂತು ಕಟ್ಟಲು ತಡವಾಗಿದ್ದಕ್ಕೆ ಹಣಕಾಸು ಸಂಸ್ಥೆಯವರು ಪುಡಿ ರೌಡಿಗಳಂತೆ ಮನೆಗೆ ನುಗ್ಗಿ ಅಟ್ಟಹಾಸ ಮೆರೆದ ಘಟನೆ ನಗರದಲ್ಲಿ ವರದಿಯಾಗಿದೆ.
ಇಲ್ಲಿನ ಭಗತ್ ಸಿಂಗ್ ನಗರದ ವಾಸಿ ಮಹಮ್ಮದ್ ಅಜರ್ ಹಲ್ಲೆಗೊಳಗಾದ ವ್ಯಕ್ತಿ. ಸಾಲ ಕಟ್ಟಲು 10 ದಿನ ತಡವಾಗಿದ್ದಕ್ಕೆ ಮಹಮ್ಮದ್ ಅಜರ್ ಮನೆಗೆ ನುಗ್ಗಿದ ಹಣಕಾಸು ಸಂಸ್ಥೆ ಸಿಬ್ಬಂದಿ ಅವಾಚ್ಯವಾಗಿ ನಿಂದಿಸಿ, ಹಲ್ಲೆ ಮಾಡಿರುವ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಮಹಮ್ಮದ್ ಅಜರ್ ಬಜಾಜ್ ಫೈನಾನ್ಸ್ ನಿಂದ 1.66 ಲಕ್ಷ ರೂ. ಸಾಲ ಪಡೆದಿದ್ದು, ಆರ್ಥಿಕ ಸಮಸ್ಯೆಯಿಂದ ಫೆಬ್ರವರಿ ತಿಂಗಳ ಕಂತಿನ ಹಣ ಕಟ್ಟುವುದು ತಡವಾಗಿತ್ತು. ಈ ಹಿನ್ನೆಲೆಯಲ್ಲಿ ಸಾಲ ವಸೂಲಾತಿ ಸಿಬ್ಬಂದಿ ನಿತ್ಯವೂ ಮಹಮ್ಮದ್ ಅಜರ್ ಗೆ ಫೋನ್ ಮಾಡಿ, ಕಂತು ಕಟ್ಟುವಂತೆ ಇನ್ನಿಲ್ಲದಂತೆ ಮಾನಸಿಕ ಹಿಂಸೆ ನೀಡುತ್ತಿದ್ದರು ಎನ್ನಲಾಗಿದೆ. ಅಲ್ಲದೆ, ಫೈನಾನ್ಸ್ ನ ಲೋನ್ ರಿಕವರಿ ಏಜೆಂಟ್ ಅಂತಾ ಹೇಳಿಕೊಂಡ ಇಬ್ಬರು ವ್ಯಕ್ತಿಗಳು ಅಜರ್ ಮನೆಗೆ ಬಂದು, ಅವಾಚ್ಯ ನಿಂದನೆ ಜೊತೆಗೆ ದೈಹಿಕವಾಗಿ ಹಲ್ಲೆ ಮಾಡಿದ್ದಾರೆ. ಈ ಬಗ್ಗೆ ದೂರು ದಾಖಲಿಸಿಕೊಂಡಿರುವ ಕೆಟಿಜೆ ನಗರ ಠಾಣೆ ಪೊಲೀಸರು, ಇಬ್ಬರು ರಿಕವರಿ ಏಜೆಂಟ್ ಗಳನ್ನು ಬಂಧಿಸಿದ್ದಾರೆ. ತಲೆ ಮರೆಸಿಕೊಂಡಿರುವ ಹಣಕಾಸು ಸಂಸ್ಥೆ ವ್ಯವಸ್ಥಾಪಕನಿಗೆ ಶೋಧ ಮುಂದುವರೆದಿದೆ.