ಬಾಂಗ್ಲಾದೇಶದಲ್ಲಿ ಹಿಂದೂಗಳಿಗೂ ಸಮಾನ ಹಕ್ಕಿದೆ: ಪ್ರಧಾನಿ ಶೇಖ್ ಹಸೀನಾ ಪ್ರತಿಪಾದನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ʼಬಾಂಗ್ಲಾದೇಶದ ಹಿಂದೂ ಸಮುದಾಯವು ದೇಶದಲ್ಲಿ ಸಮಾನ ಹಕ್ಕುಗಳನ್ನು ಹೊಂದಿದೆʼ ಎಂದು ಪ್ರಧಾನಿ ಶೇಖ್ ಹಸೀನಾ ಹೇಳಿದ್ದಾರೆ.
ಜನ್ಮಾಷ್ಟಮಿಯ ಪ್ರಯುಕ್ತ ಢಾಕಾದ ಢಾಕೇಶ್ವರಿ ಮಂದಿರದಲ್ಲಿ ಹಿಂದೂ ಸಮುದಾಯದ ಮುಖಂಡರೊಂದಿಗೆ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಹಸೀನಾ, ಬಾಂಗ್ಲಾದೇಶ ಮುಸ್ಲಿಂ ಬಹುಸಂಖ್ಯಾತ ದೇಶವಾವಾಗಿದ್ದರೂ ಇಲ್ಲಿ ಪ್ರತಿಯೊಬ್ಬರೂ ಸಮಾನ ಹಕ್ಕುಗಳನ್ನು ಹೊಂದಿದ್ದಾರೆ. ಹಿಂದೂಗಳನ್ನು ಇಲ್ಲಿ ಸಮಾನವಾಗಿ ಕಾಣಲಾಗುತ್ತದೆ. ದುರ್ಗಾ ಪೂಜೆಯ ಸಂದರ್ಭದಲ್ಲಿ ಪಶ್ಚಿಮ ಬಂಗಾಳಕ್ಕಿಂತ ಹೆಚ್ಚಿನ ದುರ್ಗಾ ಮಂಟಪಗಳು ಢಾಕಾದಲ್ಲಿ ಇರುತ್ತವೆ. ಇತರ ಧರ್ಮಗಳ ಭಕ್ತರು ತಮ್ಮನ್ನು ಅಲ್ಪಸಂಖ್ಯಾತರು ಎಂದು ಭಾವಿಸಬೇಡಿ ಎಂದು ಅವರು ಹೇಳಿದ್ದಾರೆ.
ʼಎಲ್ಲಾ ಧರ್ಮದ ಜನರು ದೇಶದಲ್ಲಿ ಸಮಾನ ಹಕ್ಕುಗಳೊಂದಿಗೆ ಬದುಕಬೇಕೆಂದು ನಾವು ಬಯಸುತ್ತೇವೆ. ನೀವು ಈ ದೇಶದ ಜನರು, ಇಲ್ಲಿ ನಿಮಗೆ ಸಮಾನ ಹಕ್ಕುಗಳಿವೆ, ನನಗಿರುವಂತೆಯೇ ನಿಮಗೂ ಅದೇ ಹಕ್ಕುಗಳಿವೆ” ಎಂದು ಹಸೀನಾ ಪ್ರತಿಪಾದಿಸಿದ್ದಾರೆ.
ಅಹಿತಕರ ಘಟನೆ ನಡೆದಾಗಲೆಲ್ಲಾ ಹಿಂದೂ ಸಮುದಾಯಕ್ಕೆ ಬಾಂಗ್ಲಾದೇಶದಲ್ಲಿ ಯಾವುದೇ ಹಕ್ಕು ಇಲ್ಲ ಎಂಬ ರೀತಿಯಲ್ಲಿ ಪ್ರಚಾರ ಮಾಡಲಾಗುತ್ತದೆ ಎಂದು ಹಸೀನಾ ವಿಷಾದಿಸಿದರು.
“ಹಿಂದೂಗಳಿಗೆ ಇಲ್ಲಿ ಯಾವುದೇ ಹಕ್ಕಿಲ್ಲ ಎಂಬ ರೀತಿಯಲ್ಲಿ ಇಲ್ಲಿನ ಘಟನೆಗಳಿಗೆ ಬಣ್ಣ ಹಚ್ಚಲಾಗಿದೆ. ಮತ್ತು ಘಟನೆಗಳ ನಂತರ ಸರ್ಕಾರ ಕೈಗೊಳ್ಳುವ ಕ್ರಮಗಳು ಗಮನಕ್ಕೆ ಬರುವುದಿಲ್ಲ ಎಂದು ಅವರು ಬೇಸರಿಸಿದರು. ಯಾವುದೇ ಧರ್ಮದ ಜನರನ್ನು ದುರ್ಬಲಗೊಳಿಸುವುದನ್ನು ತಮ್ಮ ಸರ್ಕಾರ ಹಾಗೂ ಅವಾಮಿ ಲೀಗ್ ಪಕ್ಷ ಬೆಂಬಲಿಸುವುದಿಲ್ಲ ಎಂದು ಹಸೀನಾ ಹೇಳಿದರು.
2022 ರ ಜನಗಣತಿಯ ಪ್ರಕಾರ ಬಾಂಗ್ಲಾದೇಶದಲ್ಲಿ ಹಿಂದೂ ಸಮುದಾಯವು ಎರಡನೇ ಅತಿದೊಡ್ಡ ಧರ್ಮವಾಗಿದೆ. ದೇಶದ ಒಟ್ಟು 161.5 ಮಿಲಿಯನ್ ಜನಸಂಖ್ಯೆಯಲ್ಲಿ ಸರಿಸುಮಾರು 7.95 ಪ್ರತಿಶತ ಹಿಂದೂಗಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!