July 9, 2026
Thursday, July 9, 2026
spot_img

ನಮ್ಮ ಸರ್ಕಾರ ರೈತರ ಕೈಬಿಡಲ್ಲ: ಮಹದಾಯಿ, ತುಂಗಭದ್ರಾ ಜಲವಿವಾದಕ್ಕೆ ಸಿಎಂ ಐತಿಹಾಸಿಕ ತೀರ್ಮಾನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕದಲ್ಲಿ ಈ ಬಾರಿ ನಿರೀಕ್ಷಿತ ಮಳೆಯಾಗದ ಹಿನ್ನೆಲೆಯಲ್ಲಿ ಅನ್ನದಾತರು ಹಾಗೂ ಸಾರ್ವಜನಿಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಜಲಬಿಕ್ಕಟ್ಟನ್ನು ನೀಗಿಸಲು ರಾಜ್ಯ ಸರ್ಕಾರವು ಹಲವು ಮಹತ್ವದ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತಿದೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ಬೆಳಗಾವಿಯ ಸುವರ್ಣಸೌಧದಲ್ಲಿ ಪ್ರಕಟಿಸಿದ್ದಾರೆ.

₹1 ಲಕ್ಷ ಕೋಟಿ ವೆಚ್ಚದ ನದಿ ಜೋಡಣೆ ಯೋಜನೆ

ಕೃಷ್ಣಾ, ಕಾವೇರಿ ಮತ್ತು ಗೋದಾವರಿ ನದಿಗಳ ಜೋಡಣೆಗಾಗಿ ಸುಮಾರು 1 ಲಕ್ಷ ಕೋಟಿ ರೂಪಾಯಿ ವೆಚ್ಚದ ಬೃಹತ್ ಯೋಜನೆಯನ್ನು ಹಮ್ಮಿಕೊಳ್ಳಲು ಸರ್ಕಾರ ಮುಂದಾಗಿದೆ. ಈ ಐತಿಹಾಸಿಕ ಪ್ರಾಜೆಕ್ಟ್‌ ಅನುಷ್ಠಾನಕ್ಕಾಗಿ ಕೇಂದ್ರ ಸರ್ಕಾರದ ಸಹಕಾರವನ್ನು ಕೋರಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಮಹದಾಯಿ ಜಾರಿ ಹಾಗೂ ಡ್ಯಾಂಗಳ ನವೀಕರಣ

ಮಹದಾಯಿ ಯೋಜನೆಯ ಅನುಷ್ಠಾನಕ್ಕಾಗಿ ಕೇಂದ್ರ ಸಚಿವರೊಂದಿಗೆ ಸತತ ಐದು ಬಾರಿ ಮಾತುಕತೆ ನಡೆಸಲಾಗಿದ್ದು, ಗೋವಾ ಮತ್ತು ಮಹಾರಾಷ್ಟ್ರ ಸಿಎಂಗಳ ಜೊತೆಯೂ ಶೀಘ್ರದಲ್ಲೇ ಚರ್ಚಿಸುವುದಾಗಿ ಡಿಕೆಶಿ ಹೇಳಿದ್ದಾರೆ. ಇನ್ನು ತುಂಗಭದ್ರಾ ಸೇರಿದಂತೆ 50 ವರ್ಷ ಪೂರೈಸಿರುವ ರಾಜ್ಯದ ಎಲ್ಲಾ ಜಲಾಶಯಗಳ ಗೇಟ್‌ಗಳನ್ನು ಬದಲಾಯಿಸಲು ಹಾಗೂ ಹೂಳು ತೆಗೆಯಲು ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯಲ್ಲಿ ಐತಿಹಾಸಿಕ ತೀರ್ಮಾನ ಕೈಗೊಳ್ಳಲಾಗಿದೆ. ಶಾಸಕರ ಸಲಹೆಯಂತೆ ಮೋಡ ಬಿತ್ತನೆ ಕುರಿತು ವರದಿ ಪರಿಶೀಲಿಸಲಾಗುತ್ತಿದೆ.

ಗ್ರಾಮೀಣ ಭಾಗಕ್ಕೆ ₹1 ಕೋಟಿ ತುರ್ತು ಅನುದಾನ

ಕುಡಿಯುವ ನೀರಿನ ಅಭಾವ ಸೃಷ್ಟಿಯಾಗದಂತೆ ತಡೆಯಲು ಗ್ರಾಮೀಣ ಕ್ಷೇತ್ರದ ಪ್ರತಿಯೊಬ್ಬ ಶಾಸಕರಿಗೆ ತಲಾ 1 ಕೋಟಿ ರೂಪಾಯಿ ವಿಶೇಷ ಅನುದಾನ ಘೋಷಿಸಲಾಗಿದೆ. ಕೆರೆ ಹಾಗೂ ಜಲಾಶಯಗಳಲ್ಲಿ ಕುಡಿಯುವ ನೀರನ್ನು ಕಡ್ಡಾಯವಾಗಿ ಸಂಗ್ರಹಿಸಿಡಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದು, ರೈತರ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !