ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರತಿದಿನ ಆಫೀಸ್‌ಗೆ ಹೋಗೋಕೆ, ಇನ್ನೆಲ್ಲಿಗೆ ಹೋಗೋಕೋ ಟ್ರಾಫಿಕ್ ಇಲ್ಲದ, ಸೌಂಡ್ ಇಲ್ಲದ ಸ್ಮೂತ್ ಪ್ರಯಾಣಕ್ಕೆ ಸಾಥ್ ನೀಡೋದು ನಮ್ಮ ಮೆಟ್ರೋ. ಕೂರೋಕೆ ಸೀಟ್ ಇಲ್ಲದಿದ್ರೂ ಪರವಾಗಿಲ್ಲ, ಆರಾಮಾಗಿ ನಿಂತುಕೊಂಡೇ ಪ್ರಯಾಣ ಮಾಡಿದ್ರೂ ಬಸ್, ಕ್ಯಾಬ್ ಅಥವಾ ಆಟೋಗಿಂತ ಬೆಟರ್ ಅನ್ನೋದು ಜನರ ಅಭಿಪ್ರಾಯ!
ದೇಶದ 2ನೇ ಅತೀ ದೊಡ್ಡ ಮೆಟ್ರೋ ರೈಲು ಜಾಲ ನಮ್ಮ ಮೆಟ್ರೋಗೆ 14ನೇ ವರ್ಷಕ್ಕೆ ಕಾಲಿಟ್ಟಿದ್ದು, ಬೆಂಗಳೂರು ನಗರಕ್ಕೆ ಒಂದು ಪ್ರಮುಖ ಸಾರ್ವಜನಿಕ ಸಾರಿಗೆ ವಿಧಾನವಾಗಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.
ನಮ್ಮ ಮೆಟ್ರೋ ರೈಲು ಸೇವೆ ಭಾನುವಾರ ತನ್ನ 14 ನೇ ವರ್ಷಕ್ಕೆ ಕಾಲಿಟ್ಟಿದ್ದು, ಅಕ್ಟೋಬರ್ 20, 2011 ರಂದು ಬೆಂಗಳೂರಿನಲ್ಲಿ ಮೊಟ್ಟ ಮೊದಲ ಮೆಟ್ರೋ ರೈಲು ಸೇವೆ ಪ್ರಾರಂಭವಾಗಿತ್ತು. ಆರಂಭಿಕ ಅವಧಿಯಲ್ಲಿ ಬೈಯಪ್ಪನಹಳ್ಳಿ ಮತ್ತು ಎಂಜಿ ರಸ್ತೆ ನಡುವಿನ 6.7-ಕಿಮೀ ಮಾರ್ಗದಲ್ಲಿ ಮೆಟ್ರೊ ಪ್ರಯಾಣ ನಡೆದಿತ್ತು.
ಬಳಿಕ ಕ್ರಮೇಣ ತನ್ನ ಜಾಲವನ್ನು ಮತ್ತು ಮಾರ್ಗವನ್ನು ವಿಸ್ತರಿಸಿಕೊಳ್ಳುತ್ತಾ ಸಾಗಿ ಬೆಂಗಳೂರಿಗರು ಇಂದು ಪೂರ್ಣಗೊಂಡ ಹೊಸ ಮೆಟ್ರೋ ಮಾರ್ಗಗಳನ್ನು ಬಳಕೆ ಮಾಡಲು ಉತ್ಸುಕರಾಗಿದ್ದಾರೆ. ಅಂತೆಯೇ ಇಂದು ಮೆಟ್ರೋರೈಲು ಖ್ಯಾತಿಗೆ ಹೇಗಿದೆ ಎಂದರೆ ಹೊಸ ಹೊಸ ಮಾರ್ಗಗಳಲ್ಲಿ ಮೆಟ್ರೋ ರೈಲು ಸಂಪರ್ಕ ನೀಡುವಂತೆ ಪ್ರಯಾಣಿಕರು ಒತ್ತಾಯಿಸುತ್ತಿದ್ದಾರೆ.
ಬೆಂಗಳೂರು ಮೆಟ್ರೋ ರೈಲಿನಲ್ಲಿ ನಿತ್ಯ ಸರಾಸರಿ 7.5 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಿದ್ದು, ಇದು ದೇಶದ ಎರಡನೇ ಅತಿದೊಡ್ಡ ಮೆಟ್ರೋರೈಲು ನೆಟ್‌ವರ್ಕ್ ಆಗಿದೆ. ದೆಹಲಿ ಮೆಟ್ರೋ ನಂತರ ಬೆಂಗಳೂರು ಮೆಟ್ರೋ 73.81 ಕಿಮೀ ವ್ಯಾಪ್ತಿ ಮತ್ತು 66 ನಿಲ್ದಾಣಗಳೊಂದಿಗೆ ಭಾರತದ ಎರಡನೇ ಅತಿದೊಡ್ಡ ಮೆಟ್ರೋ ಜಾಲವಾಗಿ ಹೊರಹೊಮ್ಮಿದೆ.
ಮುಂದಿನ ನಾಲ್ಕು ತಿಂಗಳಲ್ಲಿ ಮೆಟ್ರೋ ರೈಲು ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದ್ದು, ನಾಗಸಂದ್ರ ಮತ್ತು ಮಾದಾವರ ನಡುವಿನ 3.14-ಕಿಮೀ ಸಣ್ಣ ಮಾರ್ಗ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿ ಮೂಲಕ ಬಹು ನಿರೀಕ್ಷಿತ ಆರ್‌ವಿ ರಸ್ತೆ-ಬೊಮ್ಮಸಂದ್ರ ಸ್ಟ್ರೆಚ್ (ಹಳದಿ ಲೈನ್) ಪ್ರಾರಂಭವಾದರೆ ಮೆಟ್ರೋ ರೈಲು ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಭರವಸೆ ವ್ಯಕ್ತಪಡಿಸಿದ್ದಾರೆ.