ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನವನ್ನು ಹತೋಟಿಯಲ್ಲಿ ಇಡಲು ನಾವು ಪ್ರಧಾನಿಗೆ ಬೆಂಬಲ ಕೊಟ್ಟಿದ್ದೇವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಸದಾಶಿವನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,ಜನರ ಅನಿಸಿಕೆ ಹಾಗೂ ದೇಶದಲ್ಲಿ ಇರುವ ಭಾವನೆ ಜೊತೆಗೆ ಎಲ್ಲಾ ಪಕ್ಷಗಳು ಅವರಿಗೆ ಅಧಿಕಾರ ನೀಡಿದ್ದೇವೆ. ಪಾಕಿಸ್ತಾನದ ವಿರುದ್ಧ ಕಾರ್ಯಾಚರಣೆ ಅಧಿಕಾರ ಮಾಡಲು ಕೊಟ್ಟಿದ್ದೇವೆ. ಅದನ್ನು ಅವರು ಉಪಯೋಗ ಮಾಡಿಕೊಳ್ಳಲಿ, ತಮ್ಮ ಕೆಲಸವನ್ನು ಅವರು ಮಾಡಲಿ. ದೇಶದ ರಕ್ಷಣೆ ಮಾಡುವುದಕ್ಕೆ ಆದಷ್ಟು ಬೇಗನೆ ಒಳ್ಳೆಯ ಹೆಜ್ಜೆಯನ್ನು ಇಡಬೇಕು ಎಂದರು.
ನಾವು ಎಲ್ಲಾ ಪಕ್ಷದವರು ಒಂದಾಗಿ ಅಧಿವೇಶನ ಕರೆಯಬೇಕು ಎಂದು ಹೇಳಿದ್ದೇವೆ. ಪ್ರಧಾನ ಮಂತ್ರಿಗಳು ಅಧಿವೇಶನದಲ್ಲಿ ಇರಬೇಕು. ಪ್ರಧಾನಮಂತ್ರಿಗಳು ಯಾವೆಲ್ಲ ಕ್ರಮ ತೆಗೆದುಕೊಂಡಿದ್ದಾರೆ ಅದನ್ನು ಹೇಳಬೇಕು. ಕೆಲವೊಂದು ಗುಪ್ತ ಕಾರ್ಯಸೂಚಿಗಳಿರುತ್ತದೆ, ಅದನ್ನು ಮಾಡಲಿ. ಇವತ್ತಿನ ಪರಿಸ್ಥಿತಿ ಏನಿದೆ, ಅವರು ಏನು ಮಾಡಬೇಕು ಎಂಬುದು ಮನಸ್ಸಿನಲ್ಲಿದೆ. ಅದನ್ನು ಫ್ಲೋರ್ ಲೀಡರ್ಸ್ನ ಕರೆದು ಮಾತನಾಡಿಸುವುದು ಒಳ್ಳೆಯದು ಎಂದು ಹೇಳಿದರು.
ಪಹಲ್ಗಾಮ್ ದಾಳಿಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡದಂತೆ ಕೈ ನಾಯಕರಿಗೆ ಸೂಚನೆ ವಿಚಾರವಾಗಿ ಮಾತನಾಡಿದ ಅವರು, ಅದರ ಸುತ್ತೋಲೆ ಹೊರಡಿಸಿದ್ದೇವೆ. ದೆಹಲಿಯಲ್ಲಿ ವರ್ಕಿಂಗ್ ಕಮಿಟಿ ಸಭೆ ಮಾಡಿದ್ದೆವು. ವರ್ಕಿಂಗ್ ಕಮಿಟಿಯಲ್ಲಿ ನಿರ್ಣಯ ತೆಗೆದುಕೊಂಡಿದ್ದೆವು. ಆ ನಿರ್ಣಯವನ್ನ ಎಲ್ಲರೂ ಪಾಲಿಸಬೇಕು. ಇದನ್ನ ಮತ್ತೊಮ್ಮೆ ಅವರಿಗೆ ಮನವರಿಕೆ ಮಾಡಿದ್ದೇವೆ. ಎಲ್ಲರೂ ಅದನ್ನು ಫಾಲೋ ಮಾಡಬೇಕು ಎಂದು ಸೂಚನೆ ನೀಡಿದರು.