ಹೊಸದಿಗಂತ ಡಿಜಿಟಲ್ ಡೆಸ್ಕ್:
ಖಾಸಗಿ ನರ್ಸಿಂಗ್ ಮತ್ತು ಪ್ಯಾರಾಮೆಡಿಕಲ್ ಕಾಲೇಜಿನ ಸುಮಾರು 137 ವಿದ್ಯಾರ್ಥಿಗಳು ನಿನ್ನೆ ತಮ್ಮ ಹಾಸ್ಟೆಲ್ ಮೆಸ್‌ನಲ್ಲಿ ಆಹಾರ ಸೇವಿಸಿದ ಬಳಿಕ ಅಸ್ವಸ್ಥರಾಗಿರುವ ಘಟನೆ ಮಂಗಳೂರಿನ ಶಕ್ತಿನಗರದಲ್ಲಿ ನಡೆದಿದೆ. ಅಸ್ವಸ್ಥರಾದ ವಿದ್ಯಾರ್ಥಿಗಳನ್ನು ನಗರದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಸೋಮವಾರ ಬೆಳಗಿನ ಜಾವ 2 ಗಂಟೆಯಿಂದ ವಿದ್ಯಾರ್ಥಿಗಳಿಗೆ ಹೊಟ್ಟೆನೋವು, ವಾಂತಿ, ಭೇದಿ ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ವಿದ್ಯಾರ್ಥಿಗಳ ಸಂಬಂಧಿಕರು, ಪೋಷಕರು ಆಸ್ಪತ್ರೆಗಳ ಹೊರಗೆ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಜೆ ಆಸ್ಪತ್ರೆಯಲ್ಲಿ 52, ಕೆಎಂಸಿ ಜ್ಯೋತಿ ಆಸ್ಪತ್ರೆಯಲ್ಲಿ 18, ಯುನಿಟಿ ಆಸ್ಪತ್ರೆಯಲ್ಲಿ 14, ಸಿಟಿ ಆಸ್ಪತ್ರೆಯಲ್ಲಿ 8, ಮಂಗಳ ಆಸ್ಪತ್ರೆಯಲ್ಲಿ 3, ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ 42 ವಿದ್ಯಾರ್ಥಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಎಲ್ಲಾ ಆಸ್ಪತ್ರೆಗಳಿಗೂ ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್, ಕೇಂದ್ರ ಉಪವಿಭಾಗ ಎಸಿಪಿ ರಾಜೇಂದ್ರ ಕುಮಾರ್, ಜಿಲ್ಲಾ ಆರೋಗ್ಯ ನಿರೀಕ್ಷಕ ಡಾ ಅಶೋಕ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ʻಬೆಳಗಿನ ಜಾವ 2 ಗಂಟೆಯಿಂದ 100 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಆಹಾರ ವಿಷಪೂರಿತ ಆಹಾರ ಸೇವನೆಯ ದೂರುಗಳನ್ನು ದಾಖಲಿಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 137 ವಿದ್ಯಾರ್ಥಿಗಳನ್ನು ನಗರದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಘಟನೆಯ ಹಿಂದಿನ ಕಾರಣವನ್ನು ತಿಳಿಯಲು ತನಿಖೆ ಕೈಗೆತ್ತಿಕೊಂಡಿದ್ದೇವೆ ಎಂದು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಹೇಳಿದ್ದಾರೆ.
ಜಿಲ್ಲಾ ಆರೋಗ್ಯ ನಿರೀಕ್ಷಕ ಡಾ ಅಶೋಕ್ ಅವರು ಘಟನೆಯ ವಿವರಗಳನ್ನು ನೀಡಿದ್ದು, ಎಲ್ಲಾ ವಿದ್ಯಾರ್ಥಿಗಳು ಅಪಾಯದಿಂದ ಪಾರಾಗಿದ್ದಾರೆ ಮತ್ತು ಭಯಪಡುವ ಅಗತ್ಯವಿಲ್ಲ ಎಂದರು. “ಜನರಲ್ ನರ್ಸಿಂಗ್ ಮತ್ತು ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳು ಕಲುಷಿತ ಆಹಾರದಿಂದ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಗಾಬರಿಯಿಂದಾಗಿಯೇ ಸುಮಾರು 130 ವಿದ್ಯಾರ್ಥಿಗಳು ಚಿಕಿತ್ಸೆ ಪಡೆದಿದ್ದಾರೆ. ಆತಂಕ ಅಥವಾ ಭಯಪಡುವ ಅಗತ್ಯವಿಲ್ಲ. ಹಾಸ್ಟೆಲ್‌ಗೆ ಭೇಟಿ ನೀಡಿ ವಾರ್ಡನ್ ಜೊತೆ ಮಾತಾಡಿ ಮೂಲವನ್ನು ಪತ್ತೆ ಮಾಡುತ್ತೇವೆ ಎಂದರು.