ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರವಾದಿ ಮೊಹಮ್ಮದ್ ಕುರಿತು ಅವಹೇಳನಕಾರಿ ಹೇಳಿಕೆ ಹಿನ್ನೆಲೆಯಲ್ಲಿ, ಭಯೋತ್ಪಾದಕ ಗುಂಪು ಅಲ್ ಖೈದಾ ಬೆದರಿಕೆ ಪತ್ರವೊಂದನ್ನು ಬಿಡುಗಡೆ ಮಾಡಿದೆ. ಜೂನ್ 6 ರಂದು ಬಿಡುಗಡೆ ಮಾಡಿದ ಪತ್ರದಲ್ಲಿ ದೆಹಲಿ, ಮುಂಬೈ, ಉತ್ತರ ಪ್ರದೇಶ ಮತ್ತು ಗುಜರಾತ್‌ನಲ್ಲಿ ಆತ್ಮಾಹುತಿ ಬಾಂಬ್ ದಾಳಿ ಮಾಡುವುದಾಗಿ ಎಚ್ಚರಿಸಿದ್ದಾರೆ. “ನಮ್ಮ ಪ್ರವಾದಿಯನ್ನು ಅವಮಾನಿಸುವವರನ್ನು ನಾವು ಕೊಲ್ಲಲು ಬಯಸುತ್ತೇವೆ. ನಮ್ಮ ಪ್ರವಾದಿಯನ್ನು ಅವಮಾನಿಸುವ ಧೈರ್ಯವಿರುವವರನ್ನು ಸಾಯಿಸಲು ನಾವು ನಮ್ಮ ದೇಹ, ನಮ್ಮ ಮಕ್ಕಳ ದೇಹದಲ್ಲಿ ಸ್ಫೋಟಕಗಳನ್ನು ಸಿದ್ಧಪಡಿಸಿದ್ದೇವೆ. ಕೇಸರಿ ಭಯೋತ್ಪಾದಕರು ಈಗ ದೆಹಲಿ, ಉತ್ತರಪ್ರದೇಶ, ಗುಜರಾತ್ ಮತ್ತು ಮುಂಬೈನಲ್ಲಿ ಪ್ರಾಣ ಬಿಡಲು ಸಿದ್ಧರಾಗಿ” ಎಂದು ಪತ್ರದಲ್ಲಿ ಬರೆದಿದ್ದಾರೆ.
ಪ್ರವಾದಿ ಮೊಹಮ್ಮದ್ ವಿರುದ್ಧ ಮಾಡಿದ ಅವಹೇಳನಕಾರಿ ಹೇಳಿಕೆಗಳ ಬಗ್ಗೆ ಕೆಲವು ಮುಸ್ಲಿಂ ರಾಷ್ಟ್ರಗಳು ಪ್ರತಿಭಟಿಸಿವೆ. ಈಗಾಗಲೇ ಬಿಜೆಪಿ ನೂಪುರ್ ಶರ್ಮಾ ಅವರ ಮೇಲೆ ಕ್ರಮ ಕೈಗೊಂಡಿದೆ. ದೆಹಲಿಯ ಮಾಧ್ಯಮ ಮುಖ್ಯಸ್ಥ ನವೀನ್ ಕುಮಾರ್ ಜಿಂದಾಲ್ ಅವರನ್ನು ಕೂಡಾ ಪಕ್ಷದಿಂದ ಉಚ್ಚಾಟಿಸಲಾಗಿದೆ.
ಕುವೈತ್, ಕತಾರ್ ಮತ್ತು ಇರಾನ್‌ನಲ್ಲಿ ನಡೆದ ಪ್ರತಿಭಟನೆಗಳಿಗೆ ಮುಸ್ಲಿಂ ಗುಂಪುಗಳ ತೀಕ್ಷ್ಣ ಪ್ರತಿಕ್ರಿಯೆಯ ನಡುವೆ, ತಾನು ಎಲ್ಲಾ ಧರ್ಮಗಳನ್ನು ಗೌರವಿಸುವುದರ ಜೊತೆಗೆ ಯಾವುದೇ ಧಾರ್ಮಿಕ ವ್ಯಕ್ತಿಯನ್ನು ಅವಮಾನಿಸುವುದನ್ನು ಬಲವಾಗಿ ಖಂಡಿಸುತ್ತದೆ ಎಂದು ಬಿಜೆಪಿ ಈಗಾಗಲೇ ತಿಳಿಸಿದೆ. ಸುಮಾರು 10 ದಿನಗಳ ಹಿಂದೆ ಟಿವಿ ಸಂದರ್ಶನದಲ್ಲಿ ಶರ್ಮಾ ನೀಡಿದ ಹೇಳಿಕೆಗಳಿಂದ ಕೆಲ ದೇಶಗಳು ಭಾರತೀಯ ಉತ್ಪನ್ನಗಳ ಬಹಿಷ್ಕಾರಕ್ಕೆ ಕರೆ ನೀಡಿವೆ.