ಹೊಸದಿಗಂತ ಡಿಜಿಟಲ್ ಡೆಸ್ಕ್:
ಅನಾರೋಗ್ಯದ ಕಾರಣದಿಂದಾಗಿ ದನಗಳ ಮೇಯಿಸಲು ಕರೆದುಕೊಂಡು ಹೋಗದ ವೃದ್ಧ ರೈತನೊಬ್ಬನನ್ನು ಮಾಲೀಕ ಬಡಿದು ಹತ್ಯೆ ಮಾಡಿರುವ ಘಟನೆಯೊಂದು ಬೆಳಗಾವಿ ತಾಲ್ಲೂಕಿನ ಹಿರೇಬಾಗೇವಾಡಿ ಗ್ರಾಮದಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಹಿರೇಬಾಗೇವಾಡಿಯ ನೇಕಾರ ಗಲ್ಲಿ ನಿವಾಸಿ ಭೀಮಪ್ಪ ನಿಂಗಪ್ಪ ಕೆಂಡಪ್ಪಣ್ಣವರ್ ಎಂದು ಗುರ್ತಿಸಲಾಗಿದೆ.
ನಾಗನಗೌಡ ಗೌಡಪ್ಪ ಪಾಟೀಲ್ ಒಡೆತನದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಭೀಮಪ್ಪ, ಪಾಟೀಲ್ ಅವರ ಕೃಷಿ ಭೂಮಿಯಲ್ಲಿ ಕೆಲಸ ಮಾಡಿಕೊಂಡು, ಅವರ ಜಾನುವಾರುಗಳನ್ನು ಸಹ ನೋಡಿಕೊಳ್ಳುತ್ತಿದ್ದರು. ಅನಾರೋಗ್ಯದ ಕಾರಣ ಭೀಮಪ್ಪ ಅವರಿಗೆ ದನಗಳನ್ನು ನೋಡಿಕೊಳ್ಳಲು, ತನ್ನ ದೈನಂದಿನ ಕರ್ತವ್ಯಗಳನ್ನು ನಿರ್ವಹಿಸಲು ಸಾಧ್ಯವಾಗಿಲ್ಲ.
ಮೇ 1ರ ಗುರುವಾರ ಸಂಜೆ 4 ಗಂಟೆ ಸುಮಾರಿಗೆ ಭೀಮಪ್ಪ ಅವರ ಆರೋಗ್ಯ ಹದಗೆಟ್ಟಿದ್ದು, ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಈ ವೇಳೆ ಮನೆಗೆ ಬಂದಿರುವ ಮಾಲೀಕ ನಾಗನಗೌಡ, ದನಗಳನ್ನು ಮೇಯಿಸಲು ಕರೆದುಕೊಂಡ ಹೋಗದ್ದಕ್ಕೆ ಕೋಪದಿಂದ ಪ್ರಶ್ನಿಸಿದ್ದಾನೆ. ಬದುಕಿದ್ದೀಯಾ ಅಥವಾ ಸತ್ತಿದ್ದೀಯಾ ಎಂದು ಕಾಲಿನಿಂದ ಒದ್ದಿದ್ದಾನೆಂದು ಹೇಳಲಾಗುತ್ತಿದೆ.