ಹೊಸದಿಗಂತ ಡಿಜಿಟಲ್ ಡೆಸ್ಕ್:
- ಹರೀಶ್ ಕೆ.ಆದೂರು
ಮೂಡುಬಿದಿರೆಆಳ್ವಾಸ್ ವಿರಾಸತ್ ರಾಷ್ಟ್ರೀಯ ಸಾಂಸ್ಕೃತಿಕೋತ್ಸವದ ಸಮಯದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಕೊಡಮಾಡುವ ಪ್ರತಿಷ್ಠಿತ ಆಳ್ವಾಸ್ ವಿರಾಸತ್ ಪ್ರಶಸ್ತಿಯನ್ನು ಖ್ಯಾತ ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತ ಗಾಯಕ ಪದ್ಮಶ್ರೀ ಪುರಸ್ಕೃತ ಪಂಡಿತ್ ವೆಂಕಟೇಶ್ ಕುಮಾರ್ ಅವರಿಗೆ ಬುಧವಾರ ಗೋಧೂಳಿಯ ಶುಭಾವಸರದಲ್ಲಿ ಪ್ರದಾನಿಸಿ ಗೌರವಿಸಲಾಯಿತು.
ಒಂದು ಲಕ್ಷ ನಗದು ಸಹಿತ, ಪ್ರಶಸ್ತಿ ಫಲಕ, ಹಣ್ಣು ಹಂಪಲು, ರೇಷ್ಮೆ ಶಾಲು, ಹಾರಗಳೊಂದಿಗೆ ಸನ್ಮಾನಿಸಲಾಯಿತು. ಸುಮಂಗಲಿಯರು ಪನ್ನೀರ ಸಿಂಚನಗೈದು, ತಿಲಕವಿಟ್ಟು, ಆರತಿ ಬೆಳಗಿ ಸಾಂಪ್ರದಾಯಿಕ ಗೌರವಗಳನ್ನು ತೋರಿದರು. ವಿರಾಸತ್ ಭವ್ಯ ವೇದಿಕೆಯಲ್ಲಿ ಸಕಲ ಗೌರವಾದರಗಳೊಂದಿಗೆ ಕಲಾವಿದ ಪಂಡಿತ್ ವೆಂಕಟೇಶ್ ಕುಮಾರ್ ಅವರನ್ನು ರಾಜಮರ್ಯಾದೆಯೊಂದಿಗೆ ಗೌರವಿಸಿ ಸನ್ಮಾನಿಸಲಾಯಿತು. ಸನ್ಮಾನಕ್ಕೂ ಮೊದಲು ಅದ್ದೂರಿಯ ಮೆರವಣಿಯ ಮೂಲಕ ಗೌರವಾದರಗಳ ಸ್ವಾಗತ ನೀಡಲಾಯಿತು.
ಗುರುಗಳಿಗೆ ಅರ್ಪಣೆ
ಅದ್ದೂರಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವೆಂಕಟೇಶ್ ಕುಮಾರ್ ಅವರು “ಬಡವರು, ದೀನ ದಲಿತರು, ಅಂಗವಿಕಲರಿಗಾಗಿ ತನ್ನ ಬದುಕು ಮುಡುಪಾಗಿಟ್ಟಿದ್ದ, ಪಂಡಿತ್ ವೆಂಕಟೇಶ ಕುಮಾರ್ ಅವರ ಗುರುಗಳಾದ ಪಂಡಿತ ಪುಟ್ಟರಾಜ ಗವಾಯಿಗಳಿಗೆ ಪ್ರಶಸ್ತಿಯನ್ನು ಅರ್ಪಿಸುತ್ತಿದ್ದೇನೆ ”ಎಂದು ಭಾವುಕರಾಗಿ ನುಡಿದರು. ಪ್ರತಿಯೊಬ್ಬ ವ್ಯಕ್ತಿಗೂ ಗುರು ಅತೀ ಮುಖ್ಯವಾಗಿರುತ್ತಾರೆ ಎಂದು ವ್ಯಾಖ್ಯಾನಿಸಿದ ಅವರು, ಗುರುಗಳು ಎಂದೆಂದಿಗೂ ಶಿಷ್ಯರ ಒಳಿತನ್ನೇ ಬಯಸುತ್ತಾನೆ ಎಂದರು. ನನ್ನ ಒಳಿತನ್ನೇ ಬಯಸುತ್ತಿದ್ದ ಗುರುಗಳು ನನಗೆ ಲಭಿಸಿದ್ದು ನನ್ನ ಪುಣ್ಯ ಎಂದು ಅಭಿಪ್ರಾಯಿಸಿದರು.
ಆಳ್ವಾಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ, ಆಳ್ವಾಸ್ ವಿರಾಸತ್ ರೂವಾರಿ ಡಾ.ಎಂ.ಮೋಹನ ಆಳ್ವ, ಬೆಂಗಳೂರಿನ ಪ್ರಾರ್ಥನಾ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಕರ್ಣ ಬೆಳಗೆರೆ, ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಲ್.ಧರ್ಮ, ವಿಧಾನ ಪರಿಷತ್ತಿನ ಮಾಜಿ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಪ್ರಧಾನ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಎಲ್. ಎಚ್. ಮಂಜುನಾಥ್, ನರೇಂದ್ರ ಎಲ್. ನಾಯಕ್, ಉದ್ಯಮಿ ಶ್ರೀಪತಿ ಭಟ್ ವೇದಿಕೆಯಲ್ಲಿದ್ದರು. ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಕನ್ನಡ ಡೀನ್ ಕೆ. ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.