ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುತ್ತೈದೆಯರ ಎದೆಯಲ್ಲಿ ನಡುಕ ಹುಟ್ಟಿಸಿದ ಭೀಕರ ದಾಳಿಯಾದ ಪಹಲ್ಗಾಮ್ ಅಟ್ಯಾಕ್ ನಡೆದು ಒಂದು ವರ್ಷವಾಗಿದೆ. 365 ದಿನಗಳೇ ಉರುಳಿದರೂ ಅಟ್ಯಾಕ್ ಆದ ರೀತಿ, ಅಟ್ಯಾಕ್ ನಡೆದ ಜಾಗ, ಅಟ್ಯಾಕ್‌ನ ವೇಳೆ ಹುಟ್ಟಿದ ನಡುಕ ಇಂದಿಗೂ ಹಾಗೆಯೇ ಇದೆ.
ನಮ್ಮ ನೆಲದಲ್ಲಿ, ನಮ್ಮ ಸ್ವರ್ಗಕ್ಕೆ ಕಾಲಿಟ್ಟು ಮುತ್ತೈದೆಯರ ಕುಂಕುಮ ಅಳಿಸಿ, ಹೆತ್ತ ಮಕ್ಕಳನ್ನು ಕಳೆದುಕೊಳ್ಳುವಂತೆ ಉಗ್ರರು ಮಾಡಿದ್ದರು. ಹಿಂದುಗಳಾ? ಎನ್ನುವ ಪ್ರಶ್ನೆ ಹಾಕುತ್ತಲೇ ಪತ್ನಿಯರೆದುರು ಪತಿಯ ಹೃದಯಕ್ಕೆ ಗುಂಡಿಟ್ಟು ಪಾತಕಿಗಳು ಮುಗುಳ್ನಗೆ ಬೀರಿದ್ದರು.
ನಿಮ್ಮ ಮೋದಿಗೆ ಹೇಳಿ ಹೋಗಿ ಎಂದು ಅಣಕವಾಡಿದ್ದರು. ಹೆಣ್ಣಿನ ಸಿಂದೂರ ಅಳಿಸಿದ ಉಗ್ರರ ಜೀವನವನ್ನೇ ಭಾರತೀಯ ಸೇನೆ ಅಳಿಸಿ ಹಾಕಿತ್ತು. ಆಪರೇಷನ್ ಸಿಂದೂರ ಭಾರತ ಕೊಟ್ಟ ತಕ್ಕ ಉತ್ತರ.
ಒಂದು ವರ್ಷದ ಹಿಂದೆ ಏನಾಗಿತ್ತು?
ಜಮ್ಮು ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ಎಂಬ ಹುಲ್ಲುಗಾವಲಿನ ಸುಂದರವಾದ ಪ್ರದೇಶವಿದೆ. ಇದು ನೋಡಲು ಸ್ವರ್ಗದಂತಿದೆ. ಹೊಸತಾಗಿ ಮದುವೆಯಾಗಿ ಹನಿಮೂನ್‌ಗೆ ಬಂದವರು, ಮಕ್ಕಳು-ಹೆಂಡತಿಯೊಡನೆ ಸಮಯ ಕಳೆಯೋಕೆ ಬಂದವರು, ವರ್ಷಕ್ಕೊಮ್ಮೆ ಟ್ರಿಪ್ ಮಾಡುವವರು, ಮಕ್ಕಳನ್ನು ಮದುವೆ ಮಾಡಿ ರಿಟೈರ್ಡ್ ಜೀವನ ಎಂಜಾಯ್ ಮಾಡುವವರು ಎಲ್ಲರೂ ಈ ಹುಲ್ಲುಹಾಸಿನ ಮೇಲೆ ಕುಳಿತು, ಮಲಗಿ, ಓಡಾಡುತ್ತಾ ಎಂಜಾಯ್ ಮಾಡುತ್ತಿದ್ದರು. ಇದು ನಮ್ಮ ಬದುಕಿನ ಪುಸ್ತಕದ ಅತ್ಯಮೂಲ್ಯ ಪುಟವೆಂದು ಕಣ್ಣರಳಿಸಿ ನಕ್ಕಿದ್ದರು.
ಆದರೆ ಕೆಲವೇ ಕ್ಷಣಗಳಲ್ಲಿ ಎಲ್ಲರ ಸಂತೋಷ, ನಗು ಭಯವಾಗಿ, ಕಣ್ಣೀರಾಗಿ ಬದಲಾಯಿತು. ಇದ್ದಕ್ಕಿದ್ದಂತೆಯೇ ಶಸ್ತ್ರಸಜ್ಜಿತ ವ್ಯಕ್ತಿಗಳು ಏಕಾಏಕಿ ಗುಂಡಿನ ದಾಳಿ ನಡೆಸಲು ಆರಂಭಿಸಿದರು. ಮನಸ್ಸಿಗೆ ಬಂದ ದಿಕ್ಕಿಗೆ ಶೂಟ್ ಮಾಡಿ ಜನರಿಗೆ ಜೀವ ಝಲ್ ಎನ್ನುವಂತೆ ಮಾಡಿದ್ದರು. ದಿಕ್ಕಾಪಾಲಾಗಿ ಓಡಿದ ಜನ ಇವತ್ತು ನಮ್ಮ ಕೊನೆಯ ದಿನ ಎಂದು ನಿರ್ಧರಿಸಿದ್ದರು.
ಜನರ ಬಳಿ ವೇಗವಾಗಿ ತಲುಪಿದ ಉಗ್ರರು ನಿಲ್ಲಿಸಿ ನೀವು ಹಿಂದುನಾ? ಎಂದು ಹೇಳಿದ್ದರು. ಹು ಎಂದವರನ್ನು ಕಣ್ಣುಮಿಟುಕಿಸುವ ಸಮಯದಲ್ಲೇ ಕೊಂದು ಹಾಕಿದ್ದರು. ನಮ್ಮನ್ನೂ ಕೊಂದುಬಿಡಿ ಎಂದು ಪತ್ನಿಯರು ಕಣ್ಣೀರಿಟ್ಟರೆ, ನಿಮ್ಮನ್ನು ಕೊಲ್ಲೋದಿಲ್ಲ, ಮೋದಿಗೆ ಹೋಗಿ ಹೇಳಿ ಎಂದು ನಕ್ಕಿದ್ದರು.
ಈ ದುರ್ಘಟನೆ ಸಂಭವಿಸಿ ಒಂದು ವರ್ಷವಾಗಿದೆ. ಸಿಂದೂರ ಅಳಿಸಿಕೊಂಡ ಹೆಣ್ಣುಮಕ್ಕಳಿಗೆ ಇಂದಿಗೂ ನೆಮ್ಮದಿಯ ನಿದ್ದೆಯಿಲ್ಲ. ಆ ಕ್ಷಣ ಹೃದಯವನ್ನು ಹೊಕ್ಕಿದ್ದು, ಇದ್ದಕ್ಕಿದ್ದಂತೆಯೇ ಬೆಚ್ಚುವಂತೆ ಮಾಡಿದೆ. ಅಪ್ಪ ಅಮ್ಮ ಮಗನನ್ನು ನೆನೆದು ನೆನದು ನಿತ್ಯವೂ ಕುಗ್ಗುತ್ತಿದ್ದಾರೆ.
ಈ ದಾಳಿಯ ಹೊಣೆಯಲ್ಲಿ ದಿ ರೆಸಿಸ್ಟೆನ್ಸ್ ಫ್ರಂಟ್ ಹೊತ್ತುಕೊಂಡಿದೆ.
ಪಹಲ್ಗಾಮ್‌ಗೆ ಪ್ರತೀಕಾರವಾಗಿ ಭಾರತೀಯ ಸೇನೆ ಆಪರೇಷನ್ ಸಿಂದೂರ ಕಾರ್ಯಾಚರಣೆ ನಡೆಸಿ ಉಗ್ರರ ನೆಲೆಗಳನ್ನು ಸ್ಫೋಟಗೊಳಿಸಿದೆ. ಬರೋಬ್ಬರಿ ನೂರಕ್ಕೂ ಹೆಚ್ಚು ಉಗ್ರರನ್ನು ಸದೆಬಡೆದಿದೆ. ಇದರ ಜೊತೆಗೆ ಆಪರೇಷನ್ ಮಹಾದೇವ ಕಾರ್ಯಾಚರಣೆ ನಡೆಸಿದ್ದು, ಈ ದಾಳಿಯ ರೂವಾರಿಗಳನ್ನು ಹೊಡೆದು ಹಾಕಲಾಗಿದೆ.



