September 29, 2026
Tuesday, September 29, 2026
spot_img

ಪಹಲ್ಗಾಮ್ ಉಗ್ರರ ದಾಳಿ ಪ್ರಕರಣ: ಲಷ್ಕರ್ ಮುಖ್ಯಸ್ಥ ಹಫೀಜ್ ಸಯೀದ್ ವಿರುದ್ಧ NIA ಚಾರ್ಜ್‌ಶೀಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಳೆದ ವರ್ಷ ಪಹಲ್ಗಾಮ್‌ನ ಬೈಸರನ್ ಹುಲ್ಲುಗಾವಲಿನಲ್ಲಿ ನಡೆದ ಭೀಕರ ಪ್ರವಾಸಿಗರ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಸೋಮವಾರ ಜಮ್ಮು ನ್ಯಾಯಾಲಯಕ್ಕೆ ಪೂರಕ ಚಾರ್ಜ್‌ಶೀಟ್ ಸಲ್ಲಿಸಿದೆ. ಈ ದಾಳಿಯಲ್ಲಿ ಪಾಕಿಸ್ತಾನದ ಪಾತ್ರ ಮತ್ತು ಲಷ್ಕರ್-ಎ-ತೊಯ್ಬಾ (LeT) ಮುಖ್ಯಸ್ಥ ಹಫೀಜ್ ಸಯೀದ್‌ನ ನೇರ ಸಂಚನ್ನು ಎನ್‌ಐಎ ಎಳೆಎಳೆಯಾಗಿ ಬಿಚ್ಚಿಟ್ಟಿದೆ.

ಪಾಕಿಸ್ತಾನದ ಸಂಚು ಬಯಲು

ಕಳೆದ ವರ್ಷ ಡಿಸೆಂಬರ್‌ನಲ್ಲಿ ಸಲ್ಲಿಕೆಯಾಗಿದ್ದ 1,597 ಪುಟಗಳ ಮೂಲ ದೋಷಾರೋಪಣೆ ಪಟ್ಟಿಯ ಮುಂದುವರಿದ ಭಾಗವಾಗಿ ಇದನ್ನು ಸಲ್ಲಿಸಲಾಗಿದೆ. ಭಾರತದ ಅತ್ಯಂತ ವಾಂಟೆಡ್ ಉಗ್ರನಾದ ಹಫೀಜ್ ಸಯೀದ್, ಲಷ್ಕರ್ ಮತ್ತು ಅದರ ಮುಂಚೂಣಿ ಸಂಘಟನೆ ‘ದಿ ರೆಸಿಸ್ಟೆನ್ಸ್ ಫ್ರಂಟ್’ (TRF) ಮೂಲಕ ಭಾರತದ ವಿರುದ್ಧ ಯುದ್ಧ ಸಾರಲು ಗಡಿಯಾಚೆಯಿಂದಲೇ ಸಂಚು ರೂಪಿಸಿದ್ದ ಎಂದು ವೈಜ್ಞಾನಿಕ ಪುರಾವೆಗಳ ಸಮೇತ ಸಾಬೀತುಪಡಿಸಲಾಗಿದೆ. ಇವರ ವಿರುದ್ಧ ಬಿಎನ್‌ಎಸ್ (BNS) ಮತ್ತು ಯುಎಪಿಎ (UAPA) ಕಾಯ್ದೆಯಡಿ ಕಠಿಣ ಮೊಕದ್ದಮೆ ದಾಖಲಿಸಲಾಗಿದೆ.

ಉಗ್ರರ ನಿಗ್ರಹಕ್ಕೆ ತನಿಖೆ ಚುರುಕು

ಭಾರತೀಯ ನೆಲದಲ್ಲಿ ಧರ್ಮದ ಆಧಾರದ ಮೇಲೆ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಈ ಹತ್ಯೆ ನಡೆಸಲಾಗಿತ್ತು ಎಂದು ಎನ್‌ಐಎ ಸ್ಪಷ್ಟಪಡಿಸಿದೆ. ದಾಳಿಯಲ್ಲಿ ಭಾಗಿಯಾಗಿದ್ದ ಮೂವರು ಪಾಕಿಸ್ತಾನಿ ಉಗ್ರರನ್ನು ಈಗಾಗಲೇ ಗುರುತಿಸಲಾಗಿದ್ದು, ಅದರಲ್ಲಿ ಹಮ್ಜಾ ಆಫ್ಘಾನಿ ಎಂಬಾತನನ್ನು ಜುಲೈ 2025ರ ‘ಆಪರೇಷನ್ ಮಹಾದೇವ್’ನಲ್ಲಿ ಹತ್ಯೆ ಮಾಡಲಾಗಿದೆ. ಇಬ್ಬರು ಸ್ಥಳೀಯ ಸಹಚರರನ್ನು ಜೂನ್‌ನಲ್ಲೇ ಬಂಧಿಸಲಾಗಿದ್ದು, ಪಾಕ್ ಪ್ರಾಯೋಜಿತ ಉಗ್ರ ಜಾಲದ ಸಂಪೂರ್ಣ ಬೇರುಗಳನ್ನು ಸೀಳಲು ಎನ್‌ಐಎ ತನಿಖೆ ಮುಂದುವರಿಸಿದೆ.

Must Read