ಹೊಸದಿಗಂತ ಡಿಜಿಟಲ್ ಡೆಸ್ಕ್:
ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಅಮಾಯಕರು ಮೃತಪಟ್ಟ ಘಟನೆ ಕುರಿತು ಚರ್ಚಿಸಲು ವಿಶೇಷ ಸಂಸತ್ತಿನ ಅಧಿವೇಶನ ನಡೆಸುವಂತೆ ಕೇಂದ್ರ ಸರ್ಕಾರಕ್ಕೆ ಕಾಂಗ್ರೆಸ್ ಒತ್ತಾಯಿಸಿದೆ.
ಈ ಸಂಬಂಧ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ದಾಳಿಗೆ ಪ್ರತಿಕ್ರಿಯೆಯಾಗಿ ಸಂಸತ್ತಿನ ಎರಡೂ ಸದನಗಳ ವಿಶೇಷ ಅಧಿವೇಶನ ನಡೆಸಬೇಕೆದು ಒತ್ತಾಯಿಸಿದ್ದಾರೆ.
ಈ ಅಧಿವೇಶನವು ದಾಳಿಯ ಬಗ್ಗೆ ಜಂಟಿ ನಿಲುವನ್ನು ವ್ಯಕ್ತಪಡಿಸಲು ಮತ್ತು ಪರಿಸ್ಥಿತಿ ನಿಭಾಯಿಸಲು ಸಾಮೂಹಿಕ ಸಂಕಲ್ಪವನ್ನು ಪ್ರದರ್ಶಿಸಲು ಒಂದು ವೇದಿಕೆಯಾಗಲಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಈ ಸಮಯದಲ್ಲಿ ಒಗ್ಗಟ್ಟು ಮತ್ತು ಏಕತೆಯ ಅಗತ್ಯವಿದೆ. ಹೀಗಾಗಿ ಸರ್ಕಾರ ಎರಡೂ ಸದನಗಳ ವಿಶೇಷ ಅಧಿವೇಶನವನ್ನು ಆದಷ್ಟು ಬೇಗ ಕರೆಯಬೇಕು ಎಂದು ಹೇಳಿದ್ದಾರೆ.