ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರ ಪೈಶಾಚಿಕ ಕೃತ್ಯಕ್ಕೆ 27 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.
ಈ ಹೇಯ ಕೃತ್ಯದ ಬಗ್ಗೆ ಶಿವಣ್ಣ, ರಶ್ಮಿಕಾ ಮಂದಣ್ಣ, ರಾಮ್ ಚರಣ್, ರವೀನಾ ಟಂಡನ್ ಸೇರಿದಂತೆ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ. ಈ ಕೃತ್ಯ ಎಸಗಿದವರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಖಂಡಿಸಿದ್ದಾರೆ. ಇಡೀ ಚಿತ್ರರಂಗ ತಮ್ಮ ಸಾಮಜಿಕ ಜಾಲತಾಣಗಳಲ್ಲಿ ಘಟನೆಯನ್ನು ಖಂಡಿಸಿ ಪೋಸ್ಟ್ ಮಾಡಿದೆ.
ಶಿವರಾಜ್ಕುಮಾರ್
ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ನಡೆದಿರುವ ಉಗ್ರರ ದಾಳಿಯನ್ನ ತೀವ್ರವಾಗಿ ಖಂಡಿಸುತ್ತೇನೆ. ಶಾಂತಿ ಸೌಹಾರ್ದದ ಭಾರತದಲ್ಲಿ ಇಂತಹ ಕೃತ್ಯಗಳು ಮರುಕಳಿಸದಿರಲಿ. ಹಾಗೆಯೇ ಈ ಕೃತ್ಯ ಎಸಗಿದವರಿಗೆ ಕಠಿಣ ಶಿಕ್ಷೆ ಆಗಲಿ ಮತ್ತು ನಮ್ಮನ್ನು ಅಗಲಿದ ಎಲ್ಲಾ ಭಾರತೀಯರಿಗೆ ಭಾವಪೂರ್ಣ ಶ್ರದ್ಧಾಂಜಲಿ ಕೋರುತ್ತಾ ಎಲ್ಲಾ ಕುಟುಂಬಸ್ಥರಿಗೆ ಈ ದುಃಖವನ್ನು ಭರಿಸುವ ಶಕ್ತಿ ಹಾಗೂ ಧೈರ್ಯವನ್ನು ದೇವರು ನೀಡಲಿ. ಈ ಪೈಶಾಚಿಕ ಕೃತ್ಯ ಎಸಗುವವರ ವಿರುದ್ಧದ ಸರ್ಕಾರದ ಹೋರಾಟಕ್ಕೆ ಸದಾ ಬೆಂಬಲವಿರುತ್ತದೆ ಎಂದು ಶಿವರಾಜ್ಕುಮಾರ್ ಹೇಳಿದ್ದಾರೆ.
ರಾಮ್ಚರಣ್
ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಿಂದ ಆಘಾತ ಮತ್ತು ದುಃಖವಾಗಿದೆ. ಇಂತಹ ಘಟನೆಗಳಿಗೆ ನಮ್ಮ ಸಮಾಜದಲ್ಲಿ ಸ್ಥಾನವಿಲ್ಲ ಮತ್ತು ಅವುಗಳನ್ನು ಬಲವಾಗಿ ಖಂಡಿಸಬೇಕು. ಸಂತ್ರಸ್ತರ ಕುಟುಂಬದ ಪರವಾಗಿ ಇದ್ದೇವೆ ಎಂದು ರಾಮ್ಚರಣ್ ಟ್ವೀಟ್ ಮಾಡಿದ್ದಾರೆ.
ಅನುಷ್ಕಾ ಶರ್ಮಾ
ಕಾಶ್ಮೀರದ ಪಹಲ್ಗಾಮ್ನಲ್ಲಿ ಅಮಾಯಕರ ಮೇಲೆ ನಡೆದ ಭೀಕರ ಭಯೋತ್ಪಾದಕ ದಾಳಿಯ ಬಗ್ಗೆ ಕೇಳಿ ನೋವಾಗಿದೆ. ಅವರ ಕುಟುಂಬಗಳಿಗೆ ಹೃದಯಪೂರ್ವಕ ಪ್ರಾರ್ಥನೆ ಮತ್ತು ಸಂತಾಪಗಳು. ಇದು ಎಂದಿಗೂ ಮರೆಯಲಾಗದ ಘೋರ ದಾಳಿ ಎಂದು ನಟಿ ಅನುಷ್ಕಾ ಶರ್ಮಾ ಪ್ರತಿಕ್ರಿಯೆ ನೀಡಿದ್ದಾರೆ.
ರಶ್ಮಿಕಾ ಮಂದಣ್ಣ
ಕಾಶ್ಮೀರದ ಪಹಲ್ಗಾಮ್ನಲ್ಲಿ ಅಮಾಯಕರ ಮೇಲೆ ನಡೆದ ಭೀಕರ ಭಯೋತ್ಪಾದಕ ದಾಳಿಯ ಬಗ್ಗೆ ಕೇಳಿ ನನ್ನ ಹೃದಯ ಒಡೆದುಹೋಗಿದೆ ಎಂದು ನಟಿ ರಶ್ಮಿಕಾ ಮಂದಣ್ಣ ಹೇಳಿದ್ದಾರೆ.
ರವೀನಾ ಟಂಡನ್
ಓಂ ಶಾಂತಿ, ನನ್ನ ಕಡೆಯಿಂದ ಸಂತಾಪ ಸೂಚಿಸುತ್ತೇನೆ. ಆಘಾತ ಮತ್ತು ಕೋಪ ಬರುತ್ತಿದೆ. ದುಃಖವನ್ನು ವ್ಯಕ್ತಪಡಿಸಲು ಪದಗಳಿಲ್ಲ. ನಾವು ಸಣ್ಣ ಪುಟ್ಟ ಜಗಳಗಳನ್ನು ಬಿಟ್ಟು, ಒಗ್ಗೂಡಿ ನಿಜವಾದ ಶತ್ರುಗಳನ್ನು ಅರಿತುಕೊಳ್ಳುವ ಸಮಯ ಎಂದು ರವೀನಾ ಟಂಡನ್ ಬರೆದುಕೊಂಡಿದ್ದಾರೆ.
ಸಂಜಯ್ ದತ್
ಅವರು ನಮ್ಮ ಜನರನ್ನು ರಕ್ತದಲ್ಲಿ ಕೊಂದಿದ್ದಾರೆ. ಇದನ್ನೂ ಕ್ಷಮಿಸಲು ಸಾಧ್ಯವಿಲ್ಲ. ನಾವು ಪ್ರತಿಕಾರ ತೀರಿಸಿಕೊಳ್ಳಬೇಕು. ನಮ್ಮ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜ್ನಾಥ್ ಸಿಂಗ್ ಅವರು ಹೈಯ ಕೃತ್ಯ ಮಾಡಿದವರಿಗೆ ಅರ್ಹವಾದದ್ದನ್ನು ನೀಡಬೇಕೆಂದು ನಾನು ವಿನಂತಿಸುತ್ತೇನೆ ಎಂದು ಸಂಜಯ್ ದತ್ ಹೇಳಿದ್ದಾರೆ.