ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ದೀಪಾವಳಿ ಪ್ರಯುಕ್ತ ತಮ್ಮ ಬಂಗಲೆಗೆ ಬಣ್ಣ ಬಳಿಯುವ ಪೈಂಟ್ ಕೆಲಸಗಾರರು ಮತ್ತು ಸಾಂಪ್ರದಾಯಿಕ ಮಣ್ಣಿನ ಮಡಕೆ ತಯಾರಿಸುವ ಕುಂಬಾರರೊಂದಿಗೆ ಬೆರೆತು ಮಾತುಕತೆ ನಡೆಸಿದ್ದಾರೆ.
ಮಾತ್ರವಲ್ಲ ಗೋಡೆಗೆ ತಾವೇ ಪೈಂಟ್ ಬಳಿಯುವ ಜತೆಗೆ ಮಡಕೆಯನ್ನೂ ತಯಾರಿಸಿದ್ದಾರೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ .
ದೀಪಾವಳಿಗೆ ಮುಂಚಿತವಾಗಿ ತಮ್ಮ ಬಂಗಲೆಯಲ್ಲಿ ನಡೆಯುತ್ತಿದ್ದ ಪೈಂಟ್ ಕಾಮಗಾರಿಯನ್ನು ವೀಕ್ಷಿಸಿದ ಅವರು ಕಾರ್ಮಿಕರನ್ನು ಕೆಲಹೊತ್ತು ಮಾತನಾಡಿಸಿದರು. ಜತೆಗೆ ಕುಂಬಾರರ ಬಳಿಗೂ ತೆರಳಿ ಅವರೊಂದಿಗೆ ಸಂವಾದ ನಡೆಸಿದರು. ಯೂಟ್ಯೂಬ್‌ನಲ್ಲಿ ಈ ವಿಡಿಯೊವನ್ನು ಹಂಚಿಕೊಂಡ ಅವರು ಪ್ರತಿಯೊಬ್ಬರ ಕೊಡುಗೆಯನ್ನು ಗೌರವಿಸಬೇಕು ಎಂದು ಕರೆ ನೀಡಿದರು.
9 ನಿಮಿಷದ ವಿಡಿಯೊದಲ್ಲಿ ರಾಹುಲ್ ಗಾಂಧಿ ಅವರು ತಮ್ಮ ಸೋದರಳಿಯ ರೈಹಾನ್ ರಾಜೀವ್ ವಾದ್ರಾ ಅವರಿಗೆ ಜನರ ಮನೆಗಳನ್ನು ಬೆಳಗಿಸಲು ಸಹಾಯ ಮಾಡುವವರ ಬಗ್ಗೆ ತಿಳಿಸುತ್ತಿರುವುದು ಸೆರೆಯಾಗಿದೆ. ಅದಕ್ಕಾಗಿಯೇ ದೀಪಾವಳಿಯ ಮೊದಲು ಅಂತಹವರನ್ನು ಭೇಟಿ ಮಾಡಲು ಮತ್ತು ಅವರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.
ಶೇಷ ಜನರೊಂದಿಗೆ ಸ್ಮರಣೀಯ ದೀಪಾವಳಿ – ಕೆಲವು ಪೈಂಟರ್ ಸಹೋದರರೊಂದಿಗೆ ಕೆಲಸ ಮಾಡುವ ಮೂಲಕ ಮತ್ತು ಕುಂಬಾರ ಕುಟುಂಬದೊಂದಿಗೆ ಮಣ್ಣಿನ ದೀಪಗಳನ್ನು ತಯಾರಿಸುವ ಮೂಲಕ ನಾನು ಈ ದೀಪಾವಳಿಯನ್ನು ಆಚರಿಸಿದೆ. ನಾನು ಅವರ ಕೆಲಸವನ್ನು ಹತ್ತಿರದಿಂದ ನೋಡಿದೆ, ಅವರ ಕೌಶಲ್ಯಗಳನ್ನು ಕಲಿಯಲು ಪ್ರಯತ್ನಿಸಿದೆ ಮತ್ತು ಅವರ ಸಮಸ್ಯೆಗಳು ಮತ್ತು ತೊಂದರೆಗಳನ್ನು ಅರ್ಥ ಮಾಡಿಕೊಂಡಿದ್ದೇನೆ ಎಂದು ರಾಹುಲ್ ಗಾಂಧಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ರಾಹುಲ್ ಗಾಂಧಿ ತಮ್ಮ ದಿಲ್ಲಿಯ ಜನಪಥ್ ನಿವಾಸದಲ್ಲಿ ಕಾರ್ಮಿಕರಿಂದ ಗೋಡೆಗಳಿಗೆ ಬಣ್ಣ ಹಚ್ಚುವುದನ್ನು ಕಲಿಯುತ್ತಿರುವುದು ಮತ್ತು ಕುಂಬಾರರ ಮನೆಯಲ್ಲಿ ತಮ್ಮ ಕೈಯಾರೆ ಮಣ್ಣಿನ ಮಡಕೆ ತಯಾರಿಸಲು ಪ್ರಯತ್ನಿಸುವುದು ವಿಡಿಯೊದಲ್ಲಿ ಕಂಡು ಬಂದಿದೆ. ಈ ವೇಳೆ ಅವರು ಮಣ್ಣಿನ ಹಣತೆಯನ್ನು ತಯಾರಿಸಿ ಅದನ್ನು ತಮ್ಮ ತಾಯಿ ಮತ್ತು ಸಹೋದರಿಗೆ ಉಡುಗೊರೆಯಾಗಿ ನೀಡುವುದಾಗಿ ಹೇಳಿದರು.
ಜೇಡಿಮಣ್ಣಿನಿಂದ ಸಂತೋಷವನ್ನು ಗಳಿಸುತ್ತಾರೆ. ಇತರರು ಹಬ್ಬದ ಸಂಭ್ರಮದಲ್ಲಿ ಹಣತೆಯನ್ನು ಬೆಳಗುತ್ತಾರೆ. ಆದರೆ ಅವರ ಬದುಕಿನಲ್ಲಿ ಬೆಳಕು ಮೂಡುತ್ತದೆಯೇ? ಮನೆಗಳನ್ನು ನಿರ್ಮಿಸುವವರು ಸ್ವಂತ ಮನೆಗಳನ್ನು ಹೊಂದಲು ಸಾಧ್ಯವಾಗುತ್ತಿಲ್ಲʼ ಎಂದು ರಾಹುಲ್ ಗಾಂಧಿ ವಿಷಾದ ವ್ಯಕ್ತಪಡಿಸಿದರು. ದೀಪಾವಳಿ ಬಗ್ಗೆ ಮಾತನಾಡಿದ ಅವರು, ದೀಪವು ಬಡತನ ಮತ್ತು ಅಸಹಾಯಕತೆಯ ಕತ್ತಲೆಯನ್ನು ತೊಡೆದು ಹಾಕುತ್ತದೆ ಎಂದು ತಿಳಿಸಿದರು.