ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವಕಪ್ ಪಂದ್ಯದ ವೇಳೆಯೇ ಮೈದಾನದಲ್ಲಿ ನಮಾಜ್ (Namaz) ಮಾಡಿದ್ದ ಪಾಕಿಸ್ತಾನ ಬ್ಯಾಟರ್ ಮೊಹಮ್ಮದ್ ರಿಜ್ವಾನ್ (Mohammad Rizwan) ವಿರುದ್ಧ ಐಸಿಸಿಯಲ್ಲಿ (ICC) ದೂರು ದಾಖಲಾಗಿದೆ.
ಸುಪ್ರೀಂ ಕೋರ್ಟ್ ವಕೀಲ ವಿನೀತ್ ಜಿಂದಾಲ್ (Vineet Jindal) ಅವರು ರಿಜ್ವಾನ್ ವಿರುದ್ಧ ದೂರು ನೀಡಿದ್ದಾರೆ.
ವಿಶ್ವಕಪ್ ಟೂರ್ನಿಯಲ್ಲಿ ನೆದರ್‌ಲ್ಯಾಂಡ್ (Nederland) ವಿರುದ್ಧ ಪಾಕಿಸ್ತಾನ ಮೊದಲ ಪಂದ್ಯವನ್ನು ಆಡಿತ್ತು. ಈ ಪಂದ್ಯದ ಡ್ರಿಂಕ್ಸ್ ಬ್ರೇಕ್ ಸಮಯದಲ್ಲಿ ರಿಜ್ವಾನ್ ಮೈದಾನದಲ್ಲಿ ನಮಾಜ್ ಮಾಡಿದ್ದರು.
ಈ ಘಟನೆ ಕುರಿತು ವಿನೀತ್ ಜಿಂದಾಲ್ , ಅನೇಕ ಭಾರತೀಯರ ನಡುವೆ ಕ್ರಿಕೆಟ್ ಮೈದಾನದಲ್ಲಿ ನಮಾಜ್ ಮಾಡಿರುವುದು ಕ್ರೀಡಾ ಧರ್ಮಕ್ಕೆ ವಿರುದ್ಧವಾಗಿದೆ. ಇದು ಉದ್ದೇಶಪೂರ್ವಕವಾಗಿ ನಾನು ಮುಸ್ಲಿಂ ಎಂದು ಸಂದೇಶ ನೀಡುವ ಪ್ರಯತ್ನ. ಇದು ಐಸಿಸಿ ನಿಯಮದ ಉಲ್ಲಂಘನೆ ಎಂದು ದೂರು ನೀಡಿದ್ದಾರೆ.
ರಿಜ್ವಾನ್ ಅವರ ವಿರುದ್ಧ ದೂರು ನೀಡಿರುವ ವಕೀಲ ವಿನೀತ್ ಜಿಂದಾಲ್ ಅವರು ಪಾಕ್ ನಿರೂಪಕಿ, ಕ್ರೀಡಾ ಪತ್ರಕರ್ತೆ ಝೈನಾಬ್ ಅಬ್ಬಾಸ್ (Zainab Abbas) ವಿರುದ್ಧ ದೆಹಲಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಭಾರತ ಮತ್ತು ಹಿಂದೂ ಧರ್ಮವನ್ನು ಅವಹೇಳನ ಮಾಡಿದ ಆರೋಪ ಹೊರಿಸಿ ಝೈನಾಬ್ ಅಬ್ಬಾಸ್ ವಿರುದ್ಧ ದೂರು ದಾಖಲಾಗಿತ್ತು.