ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ವಿರುದ್ಧ ಪಾಕಿಸ್ತಾನದ ಷಡ್ಯಂತ್ರಗಳು ಮುಂದುವರಿದಿವೆ. ಪಾಕಿಸ್ತಾನವು ಭಯೋತ್ಪಾದಕ ಸಂಘಟನೆಗಳ ಮೂಲಕ ಭಾರತದಲ್ಲಿ ವಿಧ್ವಂಸಕತೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ. ಇತ್ತೀಚೆಗೆ ಮತ್ತೊಂದು ಪಾಕಿಸ್ತಾನಿ ಭಯೋತ್ಪಾದಕ ಸಂಘಟನೆಯ ಸಂಚು ಬೆಳಕಿಗೆ ಬಂದಿದೆ.
ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದ ಮೇಲೆ ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ ದಾಳಿಗೆ ಯತ್ನಿಸುತ್ತಿರುವುದಾಗಿ ಎಬಿಪಿ ವರದಿ ಮಾಡಿದೆ. ಆತ್ಮಾಹುತಿ ದಾಳಿಯ ಮೂಲಕ ಜನವರಿ 26ಗಣರಾಜ್ಯೋತ್ಸವದಂದು ಅಯೋಧ್ಯೆ ರಾಮಮಂದಿರವನ್ನು ಧ್ವಂಸಗೊಳಿಸಲು ಜೈಶ್-ಎ-ಮೊಹಮ್ಮದ್ ಪ್ರಯತ್ನಿಸುತ್ತಿದೆ. ಈ ಸಂಘಟನೆಯು ಇನ್ನೂ ಭಯೋತ್ಪಾದಕರನ್ನು ಕಳುಹಿಸಲು ಪ್ರಯತ್ನಿಸುತ್ತಿದೆ ಎಂದು ವರದಿ ತಿಳಿಸಿದೆ.
ನೇಪಾಳದ ಮೂಲಕ ವಿಶೇಷ ಆತ್ಮಹತ್ಯಾ ದಳವನ್ನು ಭಾರತಕ್ಕೆ ಕಳುಹಿಸಲು ಪ್ರಯತ್ನಿಸಿದ್ದು, ಶಸ್ತ್ರಾಸ್ತ್ರಗಳನ್ನು ಕಳ್ಳಸಾಗಣೆ ಮಾಡಲು ಯತ್ನಿಸಿದ್ದಾರೆ. ಅಯೋಧ್ಯೆ ದೇಗುಲದ ಮೇಲೆ ದಾಳಿ ನಡೆಸುವ ಮೂಲಕ ದೇಶದಲ್ಲಿ ಹಿಂದೂ-ಮುಸ್ಲಿಂ ನಡುವೆ ಕಂದಕ ಸೃಷ್ಟಿಸಿ ಕೋಮುದ್ವೇಷ ಕೆರಳಿಸುವುದೇ ಭಯೋತ್ಪಾದಕ ಸಂಘಟನೆಯ ತಂತ್ರವಾಗಿರುವಂತಿದೆ. ಆರ್ಟಿಕಲ್ 370 ರದ್ದತಿಗೆ ಪ್ರತೀಕಾರವಾಗಿ ಜೈಶ್-ಎ-ಮೊಹಮ್ಮದ್ ಈ ದಾಳಿಗಳನ್ನು ನಡೆಸಲು ನಿರ್ಧರಿಸಿದೆ.