ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಡಿಯಾಚೆಗಿನ ಭಯೋತ್ಪಾದನೆಗೆ ನಿರಂತರ ಕುಮ್ಮಕ್ಕು ನೀಡುತ್ತಾ, ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಮಾನವ ಹಕ್ಕುಗಳು ಮತ್ತು ಧಾರ್ಮಿಕ ಸ್ವಾತಂತ್ರ್ಯದ ಮಾತನಾಡುತ್ತಿರುವ ಪಾಕಿಸ್ತಾನಕ್ಕೆ ವಿಶ್ವಸಂಸ್ಥೆಯಲ್ಲಿ ಭಾರತ ತೀವ್ರ ತರಾಟೆಗೆ ತೆಗೆದುಕೊಂಡಿದೆ.
ಭಾರತದ ಪ್ರಥಮ ಕಾರ್ಯದರ್ಶಿ ಭಾವಿಕಾ ಮಂಗಳಾನಂದನ್ ಅವರು ನೆರೆ ರಾಷ್ಟ್ರದ ನಕಲಿ ಕಾಳಜಿ ಹಾಗೂ ಇಬ್ಬಗೆಯ ನೀತಿಯನ್ನು ಕಟು ಶಬ್ದಗಳಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ. ಇದರ ಜೊತೆಗೆ ಜಾಗತಿಕ ದಕ್ಷಿಣ ದೇಶಗಳ ವಿರುದ್ಧ ಮಾತ್ರ ಪಕ್ಷಪಾತ ಹೊಂದಿರುವ ವಿಶ್ವಸಂಸ್ಥೆಯ ವಲಸಿಗರ ಮಾನವ ಹಕ್ಕುಗಳ ವಿಶೇಷ ವರದಿಯ ವಿಧಾನವನ್ನುಭಾರತ ತಿರಸ್ಕರಿಸಿದೆ.
ನಮ್ಮ ಬಗ್ಗೆ ಮಾತನಾಡಲು ಯೋಗ್ಯತೆ ಇಲ್ಲ
ಪಾಕಿಸ್ತಾನಕ್ಕೆ ಭಾರತದ ಮಾನವ ಹಕ್ಕುಗಳ ಬಗ್ಗೆ ಮಾತನಾಡಲು ಹಕ್ಕಿಲ್ಲ. ನಿಮ್ಮ ದೇಶದಲ್ಲಿಯೇ ಹಿಂದೂ, ಕ್ರಿಶ್ಚಿಯನ್ ಹಾಗೂ ಸಿಖ್ಖರ ಸಂಖ್ಯೆ ಕ್ಷೀಣಿಸುತ್ತಿದೆ. ಅವರ ಮೂಲಭೂತ ಹಕ್ಕನ್ನು ಕಾಪಾಡಿಕೊಳ್ಳಲು ಯೋಗ್ಯತೆ ಇಲ್ಲದ ರಾಷ್ಟ್ರವೊಂದು ನಮ್ಮ ಭಾರತದಂತಹ ಅತಿದೊಡ್ಡ ಪ್ರಜಾಪ್ರಭುತ್ವಕ್ಕೆ ಮಾನವ ಹಕ್ಕುಗಳ ಪಾಠ ಮಾಡಲು ಬರುವುದು ತಪ್ಪು ಎಂದಿದ್ದಾರೆ.
ನಿಮ್ಮ ಸೈನಿಕರ ಅಂತ್ಯಕ್ರಿಯೆ ನಡೆಸಿದ್ದೇವೆ
1999ರ ಕಾರ್ಗಿಲ್ ಯುದ್ಧ ನೆನಪಿದೆಯಾ? ಈ ಯುದ್ಧದಲ್ಲಿ ಪ್ರಾಣಕಳೆದುಕೊಂಡ ನಿಮ್ಮ ದೇಶಕ ಸೈನಿಕರ ಮೃತದೇಹವನ್ನು ನೀವು ತೆಗೆದುಕೊಂಡು ಹೋಗಿಲ್ಲ, ನಾಚಿಕೆಗೇಡಿನ ಇತಿಹಾಸ ನಿಮ್ಮದು. ನಮ್ಮ ದೇಶದಲ್ಲಿ ಮೃತ ಸೈನಿಕರಿಗೆ ಇಸ್ಲಾಮ್ ವಿಧಿವಿಧಾನಗಳ ಪ್ರಕಾರ ಸಕಲ ಸೇನಾ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಿದ್ದೇವೆ. ಇದು ನಮ್ಮ ದೇಶದ ಸಂಸ್ಕೃತಿ. ತನ್ನ ಸೈನಿಕರನ್ನೇ ಧಿಕ್ಕರಿಸಿದ ದೇಶ ಇಂದು ಸಮಾಧಿ, ಧರ್ಮ ಮತ್ತು ನಂಬಿಕೆಯ ಬಗ್ಗೆ ನಾಚಿಕೆಯಿಲ್ಲದೆ ಮಾತನಾಡುತ್ತಿರುವುದು ದೊಡ್ಡ ವಿಪರ್ಯಾಸ ಎಂದು ಛೀಮಾರಿ ಹಾಕಿದ್ದಾರೆ.
ಭಯೋತ್ಪಾದಕರು ಹಾಯಾಗಿ ಓಡಾಡುತ್ತಾರೆ
ಪಾಕಿಸ್ತಾನದಲ್ಲಿ ಮಾಮೂಲಿ ಜನರಂತೆ ಭಯೋತ್ಪಾದಕರು ಹಾಯಾಗಿ ಓಡಾಡಿಕೊಂಡಿದ್ದಾರೆ. ಅವರಿಗೆ ದೇಶ ಅಷ್ಟೊಂದು ಫ್ರೀಡಂ ಇದೆ. ಭಯೋತ್ಪಾದಕ ಒಬ್ಬ ವ್ಯಕ್ತಿಯನ್ನಷ್ಟೇ ಕೊಲ್ಲೋದಿಲ್ಲ. ಇಡೀ ರಾಷ್ಟ್ರದ ಶಾಂತಿಯನ್ನು ಕದಡುತ್ತಾನೆ. ಮನುಷ್ಯನ ಜೀವಿಸುವ ಹಕ್ಕನ್ನು, ಕನಸುಗಳನ್ನು, ಕುಟುಂಬವನ್ನು ಕಿತ್ತುಕೊಳ್ಳುತ್ತಾನೆ. ಇಂತಹ ಭಯೋತ್ಪಾದಕರ ಹಕ್ಕುಗಳಿಗಾಗಿ ವಿಶ್ವಸಂಸ್ಥೆಯ ವೇದಿಕೆಯಲ್ಲಿ ವಕಾಲತ್ತು ವಹಿಸುವವರಿಗೆ, ಆ ಭಯೋತ್ಪಾದನೆಯಿಂದ ಬಲಿಯಾದ ಮುಗ್ಧ ಜನರ ಬಗ್ಗೆ ಕನಿಷ್ಠ ಕಾಳಜಿಯೂ ಇಲ್ಲದಿರುವುದು ದುರಂತವೇ ಸರಿ ಎಂದು ಗುಡುಗಿದ್ದಾರೆ. ಭಾರತದ ಅವಿಭಾಜ್ಯ ಅಂಗವಾದ ಜಮ್ಮು ಕಾಶ್ಮೀರದ ಕುರಿತು ಮಾತನಾಡುವುದನ್ನು ನಿಲ್ಲಿಸಿ. ರಾವಲಕೋಟ್ ಸೇರಿದಂತೆ ಅಕ್ರಮ ಆಕ್ರಮಣದಲ್ಲಿರುವ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಜನರ ಅಭಿವೃದ್ಧಿ ಬಗ್ಗೆ ಚಿಂತಿಸಿ. ಪಾಕಿಸ್ತಾನದಲ್ಲಿರುವ ದುಸ್ತಿತಿ ಬಗ್ಗೆ ಗಮನಹರಿಸಿ. ಕನಿಷ್ಠ ನಿಮ್ಮದೇಶದ ಜನರಾದರೂ ಸುಭೀಕ್ಷರಾಗಿರುವಂತೆ ನೋಡಿಕೊಳ್ಳಿ ಎಂದಿದ್ದಾರೆ.



