ಭೀಕರ ಪ್ರವಾಹಕ್ಕೆ ನಲುಗಿದ ಪಾಕಿಸ್ತಾನ: ಮಾನವೀಯ ನೆಲೆಯಲ್ಲಿ ನೆರವಿಗೆ ಧಾವಿಸಿದ ಭಾರತ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಪಾಕಿಸ್ತಾನ ಹಿಂದೆಂದೂ ಕಂಡು ಕೇಳರಿಯದಂತಹ ಪ್ರವಾಹಕ್ಕೆ ತುತ್ತಾಗಿದೆ. ಸುಮಾರು 992,871 ಮನೆಗಳು ಸಂಪೂರ್ಣವಾಗಿ ಅಥವಾ ಭಾಗಶಃ ಹಾನಿಗೊಳಗಾಗಿವೆ. ಲಕ್ಷಾಂತರ ಜನರು ಆಹಾರ, ಶುದ್ಧ ಕುಡಿಯುವ ನೀರು ಮತ್ತು ಆಶ್ರಯವನ್ನು ಕಳೆದುಕೊಂಡು ಬೀದಿಗೆ ಬಂದಿದ್ದಾರೆ.
ಪ್ರವಾಹದಲ್ಲಿ ಕನಿಷ್ಠ 1,100 ಮಂದಿ ಸಾವನ್ನಪ್ಪಿ 1,575 ಮಂದಿ ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮಾಹಿತಿ ನೀಡಿದ್ದಾರೆ. ಇತಿಹಾಸದ ಅತ್ಯಂತ ಭೀಕರ ಪ್ರವಾಹ ಪರಿಸ್ಥಿತಿಗೆ ಸಿಲುಕಿರುವ ಪಾಕಿಸ್ತಾನದ ನೆರವಿಗೆ ನೆರೆ ರಾಷ್ಟ್ರ ಭಾರತ ಧಾವಿಸಿದೆ. ಪಾಕಿಸ್ತಾನಕ್ಕೆ ಅಗತ್ಯ ಮಾನವೀಯ ನೆರವು ಒದಗಿಸಲು, ಪಾಕಿಸ್ತಾನದ ಅಗತ್ಯಗಳನ್ನು ಪೂರೈಸುವ ಉದ್ದೇಶದೊಂದಿಗೆ ಪಾಕ್ ಸರ್ಕಾರದ ಉನ್ನತ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿದೆ. ಮಾಹಿತಿಗಳ ಪ್ರಕಾರ ಭಾರತವು ಪಾಕ್‌ ಗೆ ಅತ್ಯಗತ್ಯ ವಸ್ತುಗಳನ್ನು ಒದಗಿಸಲು ಅಗತ್ಯ ಸಿದ್ಧತೆ ನಡೆಸಿದೆ.
ಪಾಕಿಸ್ತಾನದಲ್ಲಿನ ಪ್ರವಾಹದ ಕುರಿತು ಸಂದೇಶ ಹಂಚಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ʼಪಾಕಿಸ್ತಾನದಲ್ಲಿ ಪ್ರವಾಹದಿಂದ ಉಂಟಾದ ವಿನಾಶವನ್ನು ನೋಡಿ ದುಃಖವಾಯಿತು. ಸಂತ್ರಸ್ತರ ಕುಟುಂಬಗಳಿಗೆ, ಗಾಯಾಳುಗಳಿಗೆ ಮತ್ತು ಈ ನೈಸರ್ಗಿಕ ವಿಕೋಪದಿಂದ ಸಂತ್ರಸ್ತರಾದ ಎಲ್ಲರಿಗೂ ನಾವು ನಮ್ಮ ಹೃತ್ಪೂರ್ವಕ ಸಂತಾಪವನ್ನು ವ್ಯಕ್ತಪಡಿಸುತ್ತೇವೆ ಮತ್ತು ಸಹಜ ಸ್ಥಿತಿಯ ಶೀಘ್ರ ಮರುಸ್ಥಾಪನೆಗಾಗಿ ಆಶಿಸುತ್ತೇವೆ ಎಂದು ಟ್ವೀಟ್‌ ಮೂಲಕ ತಿಳಿಸಿದ್ದಾರೆ.
2014ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇದೇ ಮೊದಲ ಬಾರಿಗೆ ಪ್ರಕೃತಿ ವಿಕೋಪದ ಹಿನ್ನೆಲೆಯಲ್ಲಿ ಭಾರತ ಪಾಕಿಸ್ತಾನಕ್ಕೆ ನೆರವು ನೀಡಲಿದೆ. ಈ ಹಿಂದೆ ಯುಪಿಎ ಸರ್ಕಾರದ ಅಡಿಯಲ್ಲಿ, ಭಾರತವು 2010 ರಲ್ಲಿ ಪ್ರವಾಹಕ್ಕೆ ಮತ್ತು 2005 ರಲ್ಲಿ ಭೂಕಂಪದ ಸಂದರ್ಭಗಳಲ್ಲಿ ಪಾಕಿಸ್ತಾನಕ್ಕೆ ಅಗತ್ಯ ನೆರವು ನೀಡಿತು.
ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಪಾಕಿಸ್ತಾನದಲ್ಲಿ ಇದುವರೆಗೆ ಪ್ರವಾಹವು 1,100 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ. ಮೊದಲೇವ ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿದ್ದ ಪಾಕಿಸ್ತಾನಕ್ಕೆ ಪ್ರವಾಹ ಗಾಯದ ಮೇಲೆ ಬರೆ ಎಳೆದಂತಾಗಿದೆ.  ಸರ್ಕಾರವು ದೇಶದ ಜನಸಂಖ್ಯೆಯ ಏಳನೇ ಒಂದು ಭಾಗದಷ್ಟು ಜನರನ್ನು ಸ್ಥಳಾಂತರಿಸಿದೆ. ಈ ಭೀಕರ ಬಿಕ್ಕಟ್ಟನ್ನು ಎದುರಿಸಲು ಪಾಕ್‌ ಸರ್ಕಾರ ಸಹಾಯಕ್ಕಾಗಿ ಮನವಿ ಮಾಡಿದೆ.
ಇಸ್ಲಾಮಾಬಾದ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಪಾಕಿಸ್ತಾನದ ಹಣಕಾಸು ಸಚಿವ ಮಿಫ್ತಾ ಇಸ್ಮಾಯಿಲ್, ಪ್ರವಾಹದಿಂದಾಗಿ ದೇಶಾದ್ಯಂತ ಬೆಳೆಗಳು ನಾಶವಾಗಿ ಜನರು ಸಮಸ್ಯೆಯಲ್ಲಿದ್ದಾರೆ. ಸರ್ಕಾರವು ಭಾರತದಿಂದ ತರಕಾರಿಗಳು ಮತ್ತು ಇತರ ಖಾದ್ಯ ವಸ್ತುಗಳನ್ನು ಆಮದು ಮಾಡಿಕೊಳ್ಳುವುದನ್ನು ಪರಿಗಣಿಸಬಹುದು ಎಂದು ಹೇಳಿದ್ದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!