ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೇಶದ ಗಡಿ ರಾಜ್ಯಗಳಲ್ಲಿ ಹೈ ಆಲರ್ಟ್ ಘೋಷಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಪಂಜಾಬ್ನಲ್ಲಿ ಪಾಕ್ ಗಡಿಗೆ ಹೊಂದಿಕೊಂಡಿರುವ 6ಜಿಲ್ಲೆಗಳಲ್ಲಿ ಶಾಲಾ, ಕಾಲೇಜುಗಳನ್ನು ಬಂದ್ ಮಾಡಿ ಆದೇಶ ಹೊರಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಫಿರೋಜ್ಪುರ್, ಪಠಾಣ್ಕೋಟ್, ಫಜಿಲ್ಕಾ, ಅಮೃತ್ಸರ್, ಗುರುದಾಸ್ಪುರ್ ಮತ್ತು ತರ್ನ್ ತರಣ್ ಜಿಲ್ಲೆಗಳಲ್ಲಿ ಶಾಲೆಗಳು ಬಂದ್ ಆಗಲಿದೆ. ಬುಧವಾರ ನಸುಕಿನಲ್ಲಿ ಭಾರತೀಯ ಸೇನೆ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಪ್ರದೇಶದಲ್ಲಿ ಉಗ್ರ ಚಟುವಟಿಕೆ ನಡೆಸುತ್ತಿರುವ ಜೈಶ್ ಎ ಮೊಹಮ್ಮದ್ ಭದ್ರಕೋಟೆಯಾದ ಬಹವಾಲ್ಪುರ್ ಹಾಗೂ ಲಷ್ಕರ್ ಎ ತೋಯ್ಬಾದ ಮುರಿಡ್ಕೆ ನೆಲೆಗಳು ಸೇರಿದಂತೆ 9 ಉಗ್ರರ ಅಡುಗುತಾಣಗಳ ಮೇಲೆ ದಾಳಿ ನಡೆಸಿತ್ತು. ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ.
ತರ್ನ್ ತರಣ್ ಜಿಲ್ಲೆಯ ಉಪ ಆಯುಕ್ತರು ಜಿಲ್ಲೆಯ ಎಲ್ಲಾ ಶಾಲೆಗಳು ಮೇ 8ರಿಂದ 11ರವರೆಗೆ ಮುಚ್ಚಲ್ಪಡುತ್ತವೆ ಎಂದು ಆದೇಶ ಹೊರಡಿಸಿದ್ದಾರೆ. ಫಿರೋಜ್‌ಪುರದಲ್ಲಿ, ಮುಂದಿನ 72 ಗಂಟೆಗಳ ಕಾಲ ಶಾಲೆಗಳನ್ನು ಮುಚ್ಚಲು ಅಧಿಕಾರಿಗಳು ಆದೇಶಿಸಲಾಗಿದೆ. ಫಜಿಲ್ಕಾ ಜಿಲ್ಲೆಯಲ್ಲಿ ಮುಂದಿನ ಆದೇಶದವರೆಗೆ ಶಾಲೆಗಳು ಬಂದ್ ಆಗಿರಲಿವೆ.
ಇದರ ಜೊತೆಗೆ ಮುನ್ನೆಚ್ಚರಿಕಾ ಕ್ರಮವಾಗಿ ಬುಧವಾರದಿಂದಲೇ ಚಂಢೀಗಢ, ಅಮೃತ್ಸರ ಸೇರಿದಂತೆ ಸುಮಾರು 18 ವಿಮಾನ ನಿಲ್ದಾಣಗಳನ್ನು ಬಂದ್ ಮಾಡಲಾಗಿದೆ.