ತನ್ನ ನಿವೃತ್ತ ಸೈನಿಕರನ್ನೇ ಭಾರತದ ವಿರುದ್ಧ ಉಗ್ರಗಾಮಿಗಳನ್ನಾಗಿ ಬಳಸಿದೆ ಪಾಕಿಸ್ತಾನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ತನ್ನದೇ ನೆಲದ ನಿವೃತ್ತ ಯೋಧರನ್ನು ಭಾರತದ ವಿರುದ್ಧ ಉಗ್ರಗಾಮಿಗಳನ್ನಾಗಿ ಪಾಕಿಸ್ತಾನ ಬಳಕೆ ಮಾಡಿದೆ ಎಂದು ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಅವರು ಹೇಳಿದ್ದಾರೆ.

ರಜೌರಿಯಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಐವರು ಯೋಧರಿಗೆ ಪುಷ್ಪಾರ್ಚನೆ ಸಲ್ಲಿಸಿ ಬಳಿಕ ಮಾತನಾಡಿದ್ದು, ಪಾಕಿಸ್ತಾನದಲ್ಲಿ ಕೆಲ ನಿವೃತ್ತ ಯೋಧರು ಉಗ್ರರಾಗಿ ಪರಿವರ್ತನೆಯಾಗಿರುವುದು ಕಂಡುಬಂದಿದೆ. ಉಗ್ರಗಾಮಿಗಳ ಗುರುತು ಪತ್ತೆ ಹಚ್ಚುವ ವೇಳೆ ಅವರಲ್ಲಿ ಕೆಲವರು ಪಾಕಿಸ್ತಾನದ ನಿವೃತ್ತ ಸೇನಾ ಸಿಬ್ಬಂದಿ ಎನ್ನುವ ವಿಷಯ ತಿಳಿದಿದೆ ಎಂದಿದ್ದಾರೆ.

ರಜೌರಿಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಲಷ್ಕರ್-ಎ-ತೊಯ್ಬಾದ ಉನ್ನತ ಕಮಾಂಡರ್ ಕ್ವಾರಿ ಹಾಗೂ ಇನ್ನೊಬ್ಬ ಉಗ್ರಗಾಮಿಯನ್ನು ಭಾರತೀಯ ಸೇನೆ ಸದೆಬಡೆದಿದೆ. ಈ ಎನ್‌ಕೌಂಟರ್‌ನಿಂದಾಗಿ ಉಗ್ರರಿಗೆ ಭಾರೀ ಹಿನ್ನೆಡೆಯಾಗಿದೆ. ಇಷ್ಟೇ ಅಲ್ಲದೆ ಇದೀಗ ಪಾಕಿಸ್ತಾನ ವಿದೇಶಿ ಉಗ್ರರನ್ನು ಬಳಕೆ ಮಾಡಲು ಆರಂಭಿಸಿದೆ, ಸ್ಥಳೀಯ ನೇಮಕಾತಿಗಳು ನಡೆಯಲು ಅವಕಾಶ ಸಿಗದ ಕಾರಣ ವಿದೇಶಿ ಉಗ್ರರನ್ನು ಜಮ್ಮು ಕಾಶ್ಮೀರಕ್ಕೆ ಕಳಿಸುವ ಉದ್ದೇಶವನ್ನು ಪಾಕಿಸ್ತಾನ ಹೊಂದಿದೆ ಎಂದಿದ್ದಾರೆ.

ಒಟ್ಟಾರೆ ರಜೌರಿ ಹಾಗೂ ಪೂಂಜ್‌ನಲ್ಲಿ ಕನಿಷ್ಟ 20-23 ಭಯೋತ್ಪಾದಕರು ಸಕ್ರಿಯವಾಗಿದ್ದಾರೆ. ಜಮ್ಮು ಕಾಶ್ಮೀರ ಪೊಲೀಸ್ ಹಾಗೂ ಗುಪ್ತಚರ ಸಹಾಯದಿಂದ ಒಂದು ವರ್ಷದೊಳಗೆ ಈ ಪ್ರದೇಶದಲ್ಲಿ ಭಯೋತ್ಪಾದನೆಯನ್ನು ಬೇರುಸಹಿತ ಕಿತ್ತುಹಾಕುತ್ತೇವೆ ಎಂದು ಹೇಳಿದ್ದಾರೆ.

ಇಬ್ಬರು ವಿದೇಶಿ ಉಗ್ರರ ಹತ್ಯೆಯ ಬಗ್ಗೆಯೂ ಮಾತನಾಡಿದ್ದು, ಭೀಕರ ಉಗ್ರಗಾಮಿಗಳ ಹತ್ಯೆ ಮಾಡಿದ್ದೇವೆ, ಡ್ಯಾಂಗ್ರಿಯಲ್ಲಿ ನಾಗರಿಕರು ಹಾಗೂ ಕಂಡಿಯಲ್ಲಿ ಸೈನಿಕರ ಹತ್ಯೆಯಲ್ಲಿ ಅವರು ಭಾಗಿಯಾಗಿದ್ದರು. ಒಂದು ವರ್ಷದಿಂದ ಈ ಪ್ರದೇಶದಲ್ಲಿ ಸಕ್ರಿಯರಾಗಿದ್ದ ಉಗ್ರರನ್ನು ಸದೆಬಡಿದಿದ್ದೇವೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!