ಹೊಸದಿಗಂತ ಡಿಜಿಟಲ್ ಡೆಸ್ಕ್
ಪಾಕಿಸ್ತಾನ ದಿನಕ್ಕೊಂದು ರಾಜಕೀಯ ಹೈಡ್ರಾಮಗಳಿಗೆ ಸಾಕ್ಷಿಯಾಗುತ್ತಿದೆ. ರಾಷ್ಟ್ರೀಯ ಅಸೆಂಬ್ಲಿಯನ್ನು ವಿಸರ್ಜನೆಯಾಗಿದೆ, ಬಹುಮತ ಕಳೆದುಕೊಂಡಿರುವ ಪ್ರಧಾನಿ ಇಮ್ರಾನ್ ಖಾನ್ ಕೆಲ ತಿಂಗಳಲ್ಲಿ ನಡೆಯಲಿರುವ ಚುನಾವಣೆ ವರೆಗಷ್ಟೇ ಅಧಿಕಾರದಲ್ಲಿರಲಿದ್ದಾರೆ. ಇಮ್ರಾನ್ ಪದಚ್ಯುತಿಗೆ ʼವಿದೇಶಿ ಸಂಚುʼ ನಡೆದಿವ ಕುರಿತಾಗಿ ಉನ್ನತ ಮಟ್ಟದ ತನಿಖೆಗಳು ನಡೆಯುತ್ತಿದೆ.
ಇವೆಲ್ಲಾ ಬೆಳವಣಿಗೆಗಳ ನಡುವೆ ಪಾಕ್ ಸೇನೆಯು ಪ್ರತಿಕ್ರಿಯಿಸಿದ್ದು, ಪ್ರಸ್ತುತ ದೇಶದ ರಾಜಕೀಯ ಬೆಳವಣಿಗೆ, ಬಿಕ್ಕಟ್ಟುಗಳ ಹಿಂದೆ ತನ್ನ ಕೈವಾಡ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ.
ಖಾಸಗಿ ಮಾಧ್ಯಮದೊಂದಿಗೆ ಮಾತನಾಡಿದ ಪಾಕ್ ಮಿಲಿಟರಿ ವಕ್ತಾರ ಮೇಜರ್ ಜನರಲ್ ಬಾಬರ್ ಇಫ್ತಿಕರ್, ದೇಶದ ರಾಜಕೀಯ ಹಾಗೂ ಸಂಸತ್ತಿನಲ್ಲಿ ನಡೆಯುತ್ತಿರುವ ಘಟನೆಗಳಿಗೂ ಸೇನೆಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
ಪಾಕ್ ನಲ್ಲಿ ಹೆಚ್ಚಿನ ಅಧಿಕಾರಗಳನ್ನು ಹೊಂದಿರುವ ಸೇನೆಯು ಮೂರು ದಶಕಗಳಿಗೂ ಹೆಚ್ಚುಕಾಲ ದೇಶವನ್ನು ಆಳಿದೆ. ಪಾಕ್ ನಲ್ಲಿ ಈವರೆಗೆ ಯಾವುದೇ ಪ್ರಧಾನಿಯೂ ಪೂರ್ಣ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿಲ್ಲ. ಅಲ್ಲಿ ಹೆಸರಿಗೆ ಪ್ರಜಾಪ್ರಭುತ್ವವಿದ್ದರೂ ನಿಜವಾದ ಆಡಳಿತ ಸೇನೆಯದ್ದಾಗಿರುತ್ತದೆ. ಹಾಗಾಗಿ ಇಮ್ರಾನ್ ಪದಚ್ಯುತಿ ಹಿಂದೆಯೂ ಸೇನೆ ಕೈವಾಡ ಇರುವ ಬಗ್ಗೆ ವದಂತಿಗಳು ಹರಿದಾಡಿದ್ದವು. ಕಳೆದ ವಾರ ಪಾಕ್ ಸೇನಾ ಮುಖ್ಯಸ್ಥ ಬಾಜ್ವಾ ಅವರು ಎರಡು ಬಾರಿ ಪ್ರಧಾನಿ ಇಮ್ರಾನ್ ಖಾನ್ ರನ್ನು ಭೇಟಿಯಾಗಿ ಚರ್ಚಿಸಿದ್ದರು. ಇದರಿಂದಾಗಿ ಸೇನೆಯ ಪಾತ್ರದ ಕುರಿತು ಊಹಾಪೋಹಗಳೆದ್ದಿದ್ದವು. ಈ ಹಿನ್ನೆಲೆಯಲ್ಲಿ ಸೇನೆಯ ವಕ್ತಾರ ಸ್ಪಷ್ಠನೆ ನೀಡಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ