ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಶ್ಮೀರದ ಪಹಲ್ಗಾಮ್‌ನಲ್ಲಾದ ಉಗ್ರ ದಾಳಿಯ ನಂತರ ಭಾರತೀಯ ಸೇನೆಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಹಿದ್ ಯೂಟ್ಯೂಬ್ ಖಾತೆಯನ್ನು ಭಾರತದಲ್ಲಿ ನಿರ್ಬಂಧಿಸಿದೆ. ಅದೇ ರೀತಿ ಒಲಿಂಪಿಕ್ ಚಿನ್ನದ ಪದಕ ವಿಜೇತ ಅರ್ಷದ್ ನದೀಮ್ ಅವರ ಇನ್‌ಸ್ಟಾಗ್ರಾಮ್ ಖಾತೆಯನ್ನು ಭಾರತದಲ್ಲಿ ನಿರ್ಬಂಧಿಸಲಾಗಿದೆ.
ಇದೀಗ ಪಾಕಿಸ್ತಾನ ಕ್ರಿಕೆಟಿಗರಾದ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಅವರ ಇನ್ಸ್ಟಾಗ್ರಾಮ್ ಖಾತೆಗಳನ್ನು ಭಾರತದಲ್ಲಿ ನಿಷೇಧಿಸಲಾಗಿದೆ. ಇದರಿಂದ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಅವರ ಇನ್ಸ್ಟಾಗ್ರಾಮ್ ಖಾತೆಗಳನ್ನು ಭಾರತದಲ್ಲಿ ಇನ್ನು ಮುಂದೆ ಪ್ರವೇಶಿಸಲಾಗುವುದಿಲ್ಲ.
ಈಗಾಗಲೇ ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ಘಟನೆಯ ಹಿನ್ನೆಲೆಯಲ್ಲಿ, ಭಾರತ, ಭಾರತೀಯ ಸೇನೆ ಮತ್ತು ಭದ್ರತಾ ಸಂಸ್ಥೆಗಳ ವಿರುದ್ಧ ಪ್ರಚೋದನಕಾರಿ ಮತ್ತು ಕೋಮು ಸೂಕ್ಷ್ಮ ವಿಷಯ, ಸುಳ್ಳು ಹೇಳಿಕೆಗಳು ಮತ್ತು ತಪ್ಪು ಮಾಹಿತಿಯನ್ನು ಪ್ರಸಾರ ಮಾಡಿದ್ದಕ್ಕಾಗಿ, ಭಾರತ ಸರ್ಕಾರವು 16 ಪಾಕಿಸ್ತಾನಿ ಯೂಟ್ಯೂಬ್ ಚಾನೆಲ್‌ಗಳನ್ನು ನಿಷೇಧಿಸಿದೆ. ಇದಕ್ಕೂ ಮುನ್ನ ಗೃಹ ಸಚಿವಾಲಯದ ಶಿಫಾರಸಿನ ಮೇರೆಗೆ ಭಾರತವು ಪಾಕಿಸ್ತಾನದ ಎಲ್ಲಾ ಸುದ್ದಿ ಮತ್ತು ಕ್ರೀಡಾ ಚಾನೆಲ್‌ಗಳ ಪ್ರಸಾರವನ್ನು ನಿಷೇಧಿಸಿತ್ತು. ಇದಲ್ಲದೆ, ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನದಲ್ಲಿ ಆಯೋಜಿಸಲಾಗುತ್ತಿರುವ ಪಿಎಸ್‌ಎಲ್ ಪ್ರಸಾರವನ್ನು ಸಹ ನಿಷೇಧಿಸಲಾಯಿತು.