ಪೇಸಿಎಂ ಪೋಸ್ಟರ್ ವಿಚಾರ: ವಿಧಾನಸಭೆಯಲ್ಲಿ ಗದ್ದಲ, ಗಲಾಟೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಭಾವಚಿತ್ರ ಬಳಸಿ ಕ್ಯೂ ಆರ್ ಕೋಡ್‍ ಮಾಡಿ ಪೇಸಿಎಂ ಎಂಬುದಾಗಿ ಪೋಸ್ಟರ್ ಅಂಟಿಸಿದ್ದ ವಿಚಾರ ಇಂದು ವಿಧಾನಸಭೆಯಲ್ಲಿ ಕೆಲಕಾಲ ಆಡಳಿತ ಮತ್ತು ಪ್ರತಿಪಕ್ಷಗಳ ಶಾಸಕರ ನಡುವೆ ಮಾತಿನ ವಾಗ್ದಾಳಿ, ಗದ್ದಲಕ್ಕೆ ಕಾರಣವಾಯಿತು.

ಶೂನ್ಯ ವೇಳೆಯಲ್ಲಿ ಬಿಜೆಪಿ ಶಾಸಕ ಪಿ ರಾಜೀವ್‍ ಅವರು ವಿಷಯ ಪ್ರಸ್ತಾಪಿಸಿ ಕೆಲವರು ರಾಜಕೀಯ ಲಾಭಕ್ಕಾಗಿ ಮುಖ್ಯಮಂತ್ರಿಗಳ ಹುದ್ದೆ, ಘನತೆಯನ್ನು ಅಪಮಾನ ಮಾಡಿದ್ದಾರೆ. ಇದು ರಾಜ್ಯಕ್ಕೆ ಮಾಡಿದ ಅಪಮಾನ ಎಂದರು.

ಕಾಂಗ್ರೆಸ್‍ ಶಾಸಕ ಪ್ರಿಯಾಂಕ ಖರ್ಗೆ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಪೇಸಿಎಂ ಎಂಬುದನ್ನು ಆಂದೋಲನ ಮಾಡುವುದಾಗಿ ಹೇಳಿದ್ದಾರೆ. ಇದರ ಹಿಂದೆ ರಾಜಕೀಯ ಪಕ್ಷವೊಂದರ ಕೈವಾಡವಿದೆ ಎಂದು ಆರೋಪಿಸಿದರು. ಈ ಹೇಳಿಕೆಗೆ ಕಾಂಗ್ರೆಸ್ ಶಾಸಕ ಕೃಷ್ಣಭೈರೇಗೌಡ ಆಕ್ಷೇಪಿಸಿ, ಈಗಾಗಲೇ ಪ್ರಕರಣ ಸಂಬಂಧ 8 ಜನರನ್ನು ಬಂಧಿಸಲಾಗಿದೆ. ಕಾನೂನು ಪ್ರಕಾರ, ಸರ್ಕಾರ ಯಾವುದೇ ಕ್ರಮ ಕೈಗೊಂಡರೂ ನಾವು ಅದನ್ನು ಎದುರಿಸಲು ಸಿದ್ಧರಿದ್ದೇವೆ. ಹೆದರುವ ಪ್ರಶ್ನೆಯೇ ಇಲ್ಲ ಎಂದು ತಿರುಗೇಟು ನೀಡಿದರು.

ಈ ವೇಳೆ ಕಾಂಗ್ರೆಸ್‍ ಮತ್ತು ಬಿಜೆಪಿ ಸದಸ್ಯರ ನಡುವೆ ಆರೋಪ-ಪ್ರತ್ಯಾರೋಪ ನಡೆದು ಗದ್ದಲದ ವಾತಾವರಣ ನಿರ್ಮಾಣವಾಯಿತು.
ಸಚಿವ ಬಿ. ಸಿ ಪಾಟೀಲ್‍, ಶಾಸಕರಾದ ಪ್ರೀತಂಗೌಡ, ಶಿವನಗೌಡ ನಾಯಕ್‍ ಸೇರಿದಂತೆ ಮತ್ತಿತರರು ಕಾಂಗ್ರೆಸ್‍ ವಿರುದ್ಧ ವಾಗ್ದಾಳಿ ನಡೆಸಿದರು. ಈ ವೇಳೆ ಸದನದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಯಿತು.

ಈ ಸಂದರ್ಭದಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಎರಡೂ ಕಡೆಯ ಶಾಸಕರನ್ನು ಸಮಾಧಾನ ಪಡಿಸುವ ಯತ್ನ ಮಾಡಿದರು. ಆಗಲೂ ಗದ್ದಲ ಮುಂದುವರೆದಾಗ ಸಿಟ್ಟಿಗೆದ್ದ ಅವರು, ಸರ್ಕಾರದ ಮುಖ್ಯಸಚೇತಕ ಸತೀಶ್‍ ರೆಡ್ಡಿ ಅವರನ್ನು ತರಾಟೆಗೆ ತೆಗೆದುಕೊಂಡರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!