ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಅರಮನೆ ಜಮೀನಿನ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಸುಗ್ರೀವಾಜ್ಞೆಯನ್ನು ಸುಪ್ರೀಂಕೋರ್ಟ್ ನಿರಾಕರಿಸಿದ್ದು, ಟಿಡಿಆರ್ ಅನ್ನು ತನ್ನ ಸುಪರ್ದಿಗೆ ನೀಡುವಂತೆ ಹೇಳಿದೆ.
ಬಳ್ಳಾರಿ ರಸ್ತೆ ಹಾಗೂ ಜಯಮಹಲ್ ರಸ್ತೆ ಅಗಲೀಕರಣಕ್ಕಾಗಿ ಬೆಂಗಳೂರು ಅರಮನೆ ಮೈದಾನದ 15.7 ಎಕರೆ ಜಾಗ ಬಳಕೆಗೆ ಬರೋಬ್ಬರಿ 3400 ಕೋಟಿ ರೂ. ಮೊತ್ತದ ಟಿಡಿಆರ್ ಪರಿಹಾರ ನೀಡಲು ನ್ಯಾಯಾಲಯ ಆದೇಶ ನೀಡಿತ್ತು. ಇಷ್ಟು ಮೊತ್ತದ ಪರಿಹಾರ ನೀಡಿದರೆ ಸರ್ಕಾರಕ್ಕೆ ಹೊರೆ ಆಗಲಿದೆ ಎಂಬ ಕಾರಣಕ್ಕೆ ಜ.23ರಂದು ತುರ್ತು ಸಚಿವ ಸಂಪುಟ ಸಭೆ ನಡೆಸಿದ್ದ ರಾಜ್ಯ ಸರ್ಕಾರ ರಸ್ತೆ ಅಗಲೀಕರಣ ಪ್ರಸ್ತಾಪವನ್ನೇ ಕೈಬಿಟ್ಟು ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿತ್ತು.
ಬಳಿಕ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ವೇಳೆ ರಾಜ್ಯ ಸರ್ಕಾರವು ಸುಗ್ರೀವಾಜ್ಞೆ ನಿರ್ಣಯವನ್ನು ತಿಳಿಸಿ ರಸ್ತೆ ಅಗಲೀಕರಣ ಪ್ರಸ್ತಾವನೆ ಕೈಬಿಟ್ಟಿದ್ದೇವೆ. ಹೀಗಾಗಿ 3400 ಕೋಟಿ ಟಿಡಿಆರ್ ಪರಿಹಾರ ನೀಡುವುದಿಲ್ಲ ಎಂದು ಸರ್ಕಾರ ಹೇಳಿತ್ತು. ಆದರೆ, ಇದನ್ನು ಪುರಸ್ಕರಿಸದ ಸುಪ್ರೀಂ ಕೋರ್ಟ್ 3400 ಕೋಟಿ ಟಿಡಿಆರ್ ಪರಿಹಾರ ನೀಡುವಂತೆ ನ್ಯಾಯಾಲಯ ಈಗಾಗಲೇ ಆದೇಶ ನೀಡಿದೆ. ಈ ಬಗ್ಗೆ ಯಾವುದೇ ಚರ್ಚೆ ಇಲ್ಲ ಎಂದು ಸ್ಪಷ್ಟಪಡಿಸಿತ್ತು. ಇದೀಗ 10 ದಿನಗಳ ಒಳಗಾಗಿ ಸುಪ್ರೀಂಕೋರ್ಟ್ ಗೆ ಟಿಡಿಆರ್ ಪ್ರಮಾಣಪತ್ರವನ್ನು ಸರ್ಕಾರ ನೀಡಬೇಕಾಗಿದೆ.
ರಾಜ ಮನೆತನದವರಿಗೆ ನೀಡಬೇಕಿದ್ದ 3,400 ಕೋಟಿಯ ಟಿಡಿಆರ್ ನ್ಯಾಯಾಲಯದ ಅಧಿಕಾರದಲ್ಲಿ ಇರಲಿದೆ. ಇದರಿಂದ ಟಿಡಿಆರ್ ಬಳಕೆ ಆಗಬಹುದು ಎನ್ನುವ ಆತಂಕದಿಂದ ಸರ್ಕಾರ ನಿರಾಳವಾಗಿದೆ. ಇತ್ತ ಟಿಡಿಆರ್ ನೀಡಲು ಸೂಚಿಸಿದ್ದ ನ್ಯಾಯಾಲಯಕ್ಕೆ TDR ನೀಡುವ ಮೂಲಕ ನ್ಯಾಯಾಂಗ ನಿಂದನೆಯಿಂದಲೂ ಸಿದ್ದರಾಮಯ್ಯ ಸರ್ಕಾರ ಪಾರಾಗುವ ಮೂಲಕ ತಾತ್ಕಾಲಿಕವಾಗಿ ನಿರಾಳವಾಗಿದೆ. ಇನ್ನು 49 ಕೋಟಿ ಟಿಡಿಆರ್ ಅನ್ನು ಜಮೀನು ಮಾಲೀಕರಿಗೆ ನೀಡಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ. ಹೀಗಾಗಿ ಟಿಡಿಆರ್ ಸಂಕಷ್ಟಕ್ಕೆ ತಾತ್ಕಾಲಿಕ ಪರಿಹಾರ ಕಂಡುಕೊಂಡ ಸರ್ಕಾರ ಕೊಂಚ ನಿರಾಳವಾಗಿದೆ.