ಹಿಜಾಬ್ ವಿವಾದ ಕೊನೆಗಾಣಿಸಲು ಧರ್ಮಗುರುಗಳು, ಪೋಷಕರು ಮಧ್ಯ ಪ್ರವೇಶಿಸಬೇಕು: ಮಹೇಶ್ ಜೈನಿ

ಹೊಸದಿಗಂತ ವರದಿ, ಕೊಡಗು:

‘ಹಿಜಾಬ್’ ವಿವಾದದ ಹಿಂದೆ ದೇಶದ್ರೋಹಿ ಸಂಘಟನೆಗಳ ಕೈವಾಡವಿದ್ದು ಅಮಾಯಕ ಮುಸ್ಲಿಂ ಹೆಣ್ಣು ಮಕ್ಕಳ ದಾರಿ ತಪ್ಪಿಸುವ ಷಡ್ಯಂತ್ರ ಇದಾಗಿದೆ ಎಂದು ಜಿಲ್ಲಾ ಬಿಜೆಪಿ ವಕ್ತಾರ ಮಹೇಶ್ ಜೈನಿ ಆರೋಪಿಸಿದ್ದಾರೆ. ಅಲ್ಲದೆ ಸಮವಸ್ತ್ರದ ವಿಷಯದಲ್ಲಿ ಮುಸ್ಲಿಂ ಧರ್ಮಗುರುಗಳು ಹಾಗೂ ಪೋಷಕರು ಮಧ್ಯಪ್ರವೇಶ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಒಂದೆಡೆ ಮುಸ್ಲಿಂ ಹೆಣ್ಣುಮಕ್ಕಳು ಹಿಜಾಬ್ ಧರಿಸಿ ಶಾಲಾ ಕಾಲೇಜು ಪ್ರವೇಶ ಮಾಡುತ್ತಿದ್ದರೆ, ಇದರಿಂದ ಪ್ರೇರಿತರಾಗಿ ಮತ್ತೊಂದೆಡೆ ಸಮಾನ ಸಮವಸ್ತ್ರ ನೀತಿಗಾಗಿ ಕೇಸರಿ ಶಲ್ಯದೊಡನೆ ಹಿಂದೂ ವಿದ್ಯಾರ್ಥಿಗಳು ವಿದ್ಯಾ ದೇಗುಲ ಪ್ರವೇಶ ಮಾಡುತ್ತಿದ್ದಾರೆ. ಒಟ್ಟಾರೆಯಾಗಿ ಈ ಒಂದು ಸಣ್ಣ ವಿಷಯ ರಾಜ್ಯಾದ್ಯಂತ ಮುಗ್ಧ ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳು ಮಾಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಶೈಕ್ಷಣಿಕ ಕ್ಷೇತ್ರದಲ್ಲಿ ಸಮಾನ ವಸ್ತ್ರ ಸಂಹಿತೆ ನೀತಿ ಇಂದು ನಿನ್ನೆಯದಲ್ಲ. ಅನೇಕ ವರ್ಷಗಳಿಂದ ದೇಶದ ಅನೇಕ ಸರ್ಕಾರಿ ಮತ್ತು ಖಾಸಗಿ ಶಾಲಾ ಕಾಲೇಜುಗಳು ತಮ್ಮತಮ್ಮ ಸಂಸ್ಥೆಗಳಲ್ಲಿ ಏಕತೆ ಸಾರುವ ಮತ್ತು ಇಲ್ಲಿ ಯಾರೂ ಮೇಲು ಕೀಳು ಎಂಬಾ ಭಾವನೆಗಳು ಬರದಂತೆ ವಸ್ತ್ರ ಸಂಹಿತೆ ಜಾರಿ ಮಾಡುತ್ತಾ ಯಾವುದೇ ಬೇಧಭಾವವಿಲ್ಲದೆ ಬಹಳ ವ್ಯವಸ್ಥಿತವಾಗಿ ಶಾಲಾ ಆಡಳಿತವನ್ನು ನಡೆಸಿಕೊಂಡು ಬರುತ್ತಿವೆ.
ಇದೀಗ ತಮ್ಮ ಧರ್ಮದ ಹೆಣ್ಣು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಪೋಷಕರು ಮತ್ತು ಮುಸ್ಲಿಂ ಧರ್ಮ ಗುರುಗಳು ಮಧ್ಯ ಪ್ರವೇಶ ಮಾಡಿ ಈ ವಿಷಯದಲ್ಲಿ ಶೈಕ್ಷಣಿಕ ಸಂಸ್ಥೆಗಳು ನಿಗದಿ ಮಾಡಿದ ಸಮವಸ್ತ್ರ ನೀತಿಗೆ ಬೆಂಬಲ ನೀಡಬೇಕು. ಈಗಾಗಲೇ ರಾಜ್ಯ ಸರ್ಕಾರ ಕೂಡಾ ಶಾಲಾ ಕಾಲೇಜಿನ ಗೇಟ್’ನ ತನಕ ಹಿಜಾಬ್ ಧರಿಸಲು ಅನುಮತಿ ನೀಡಿದ್ದು, ಸಮಾನತೆಯ ದೃಷ್ಟಿಯಿಂದ ಶಾಲೆಯ ಒಳಗೆ ಇತರ ವಸ್ತ್ರಗಳನ್ನು ಧರಿಸಲು ಅವಕಾಶ ನೀಡದೆ ಸಮವಸ್ತ್ರದ ನೀತಿಯನ್ನು ಕಡ್ಡಾಯವಾಗಿ ಪಾಲಿಸುವಂತಾಗಬೇಕು ಎಂದು ಅವರು ಸಲಹೆ ಮಾಡಿದ್ದಾರೆ.
ಕೇರಳದ ಮುಸ್ಲಿಂ ಬಾಹುಳ್ಯವುಳ್ಳ ಪ್ರದೇಶಗಳಲ್ಲಿ ಶೈಕ್ಷಣಿಕ ಸಂಸ್ಥೆ ನಡೆಸುತ್ತಿರುವ ಮುಸ್ಲಿಂ ಮುಖಂಡರು ಕೂಡಾ ತಮ್ಮ ತಮ್ಮ ಸಂಸ್ಥೆಗಳಲ್ಲಿ ಸಮವಸ್ತ್ರ ನೀತಿಯನ್ನು ಕಡ್ಡಾಯ ಮಾಡಿದ್ದು ಅಲ್ಲೂ ಕೂಡಾ ಎಲ್ಲೂ ಹಿಜಾಬ್ ಧರಿಸಿ ಸಂಸ್ಥೆ ಪ್ರವೇಶಕ್ಕೆ ಅನುಮತಿ ನೀಡಿಲ್ಲ ಎಂಬುದನ್ನು ಮುಸ್ಲಿಂ ಪೋಷಕರು ಅರ್ಥ ಮಾಡಿಕೊಳ್ಳಬೇಕು.
ಶಾಲಾ ಕಾಲೇಜುಗಳಲ್ಲಿ ಏಕತೆ ಮತ್ತು ಭ್ರಾತೃತ್ವ ಸಾರುವ ದೃಷ್ಟಿಯಿಂದ ಸಮವಸ್ತ್ರ ನೀತಿಯನ್ನು ಜಾರಿ ಮಾಡಿರುವ ಸರ್ಕಾರ ಆಯಾ ಶೈಕ್ಷಣಿಕ ಸಂಸ್ಥೆಗಳು ನಿಗದಿಪಡಿಸಿದ ಸಮವಸ್ತ್ರದೊಂದಿಗೆ ಶಾಲೆ ಪ್ರವೇಶ ಮಾಡಬೇಕು ಎಂದು ಸ್ಪಷ್ಟಪಡಿಸಿದೆ. ಇದರಿಂದ ಎಲ್ಲೂ ಕೂಡಾ ಯಾವುದೇ ಸಮುದಾಯದ ಹಕ್ಕಿಗೆ ಚ್ಯುತಿ ಬರುವುದಿಲ್ಲ ಮತ್ತು ತಮ್ಮ ಧಾರ್ಮಿಕ ವಿಚಾರದಲ್ಲಿ ಸರ್ಕಾರ ಕೂಡ ಮಧ್ಯ ಪ್ರವೇಶ ಮಾಡುತ್ತಿಲ್ಲ.ಆದುದರಿಂದ ಎಲ್ಲೂ ಸಂಘರ್ಷಕ್ಕೆ ಆಸ್ಪದ ನೀಡದೆ ಸರ್ಕಾರದ ನಿರ್ಧಾರಕ್ಕೆ ವಿದ್ಯಾರ್ಥಿಗಳ ಪೋಷಕರು ಮತ್ತು ಧಾರ್ಮಿಕ ಮುಖಂಡರು ಕೂಡಾ ಸಹಕಾರ ನೀಡಬೇಕೆಂದು ಕೊಡಗು ಜಿಲ್ಲಾ ಬಿಜೆಪಿ ವಕ್ತಾರ ಮಹೇಶ್ ಜೈನಿ ಮನವಿ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!