ಪೋಷಕರೇ, ಬಾಗಿಲು ಹಾಕಿದ ರೂಮ್‌ನಲ್ಲಿ ಮಕ್ಕಳು ಏನು ಮಾಡ್ತಾರೆ ಗಮನಿಸಿ, ಏಕೆಂದರೆ!!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಪುಟಾಣಿ ಕಂದಮ್ಮಗಳ ಮೇಲೆ ಹೇಗೆ ಸದಾ ಕಣ್ಣಿಟ್ಟು ಕಾಪಾಡುತ್ತೇವೋ ಅದೇ ರೀತಿ ಟೀನೇಜ್‌ ಮಕ್ಕಳ ಮೇಲೂ ಕಣ್ಣಿಡುವುದು ಈ ಕಾಲಕ್ಕೆ ಅನಿವಾರ್ಯವಾಗಿದೆ. ಮಕ್ಕಳು ಬಾಗಿಲು ಹಾಕಿಕೊಂಡು ಏನು ಮಾಡುತ್ತಾರೆ, ಕಾಲೇಜಿನ ನಂತರ ಎಲ್ಲಿಗೆ ಹೋಗುತ್ತಾರೆ, ಅವರ ಆಕ್ಟಿವಿಟಿ ಮೇಲೆ ಗಮನ ಇಡಲೇಬೇಕಾಗುತ್ತದೆ.

ಆನ್‌ಲೈನ್ ಜೂಜಾಟಕ್ಕೆ ವ್ಯಸನಿಯಾಗಿದ್ದ 20 ವರ್ಷದ ಕಾಲೇಜು ವಿದ್ಯಾರ್ಥಿ ಸಾಲ ತೀರಿಸಲು ಸಾಧ್ಯವಾಗದೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆ.ಆರ್.ಪುರಂ‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಖಾಸಗಿ ಕಾಲೇಜಿನಲ್ಲಿ ಬಿಎಸ್ಸಿ 2ನೇ ವರ್ಷದ ವಿದ್ಯಾರ್ಥಿಯಾಗಿದ್ದ ಪ್ರವೀಣ್ (20) ಆತ್ಮಹತ್ಯೆ ಮಾಡಿಕೊಂಡ ಯುವಕ. ನವೆಂಬರ್ 23 ರಂದು ಕೆಆರ್ ಪುರಂನಲ್ಲಿರುವ ಪ್ರವೀಣ್ ನಿವಾಸದಲ್ಲಿ ಈ ಘಟನೆ ನಡೆದಿದ್ದು, ಹಣವನ್ನು ಹಿಂದಿರುಗಿಸುವಂತೆ ಸ್ನೇಹಿತರು ಒತ್ತಡ ಹೇರಿದ್ದಹಿನ್ನೆಲೆಯಲ್ಲಿ ಪ್ರವೀಣ್ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪೋಷಕರು ಡಿಸೆಂಬರ್ 2 ರಂದು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರವೀಣ್ ಒಂದು ವರ್ಷದಿಂದ ಆನ್‌ಲೈನ್ ಜೂಜಾಟದ ಚಟ ಹೊಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಆತ ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ಕ್ರಿಕೆಟ್ ಮತ್ತು ಇತರ ಕ್ರೀಡೆಗಳ ಮೇಲೆ ಬೆಟ್ಟಿಂಗ್ ಕಟ್ಟುತ್ತಿದ್ದ ಎಂದು ವರದಿಯಾಗಿದೆ. ಜೂಜಾಟದ ಚಟಕ್ಕೆ ಹಣ ಹೊಂದಿಸಲು ಸ್ನೇಹಿತರು ಮತ್ತು ಸಂಬಂಧಿಕರಿಂದ ಸಾಲ ಪಡೆದಿದ್ದ. ಸಾಲ ಹೆಚ್ಚಾದಾಗ ಹಣವನ್ನು ಮರುಪಾವತಿಸುವಂತೆ ಸ್ನೇಹಿತರ ಒತ್ತಡ ಹೇರುತ್ತಿದ್ದರು. ಸಾಲ ತೀರಿಸಲು ಸಾಧ್ಯವಾಗದ ಕಾರಣ ಪ್ರವೀಣ್ ನವೆಂಬರ್ 23 ರಂದು ತಮ್ಮ ಜೀವನವನ್ನು ಕೊನೆಗೊಳಿಸಿದ್ದಾನೆ. ಸೀಲಿಂಗ್ ಫ್ಯಾನ್‌ಗೆ ನೇಣು ಹಾಕಿಕೊಂಡಿದ್ದ. ಪ್ರವೀಣ್ ಪೋಷಕರು ನೇಣು ಬಿಗಿದುಕೊಂಡಿರುವುದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಆರಂಭದಲ್ಲಿ ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಆದಾಗ್ಯೂ, ಡಿಸೆಂಬರ್ 2 ರಂದು, ಯುವಕನ ತಂದೆ ನೀಡಿದ ದೂರಿನ ಆಧಾರದ ಮೇಲೆ, ಬಿಎನ್‌ಎಸ್‌ನ ಸೆಕ್ಷನ್ 108 (ಆತ್ಮಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಹಣವನ್ನು ಹಿಂದಿರುಗಿಸುವಂತೆ ಸ್ನೇಹಿತರು ಪೀಡಿಸುತ್ತಿದ್ದರಿಂದ ಪ್ರವೀಣ್ ಈ ಕ್ರಮ ಕೈಗೊಂಡಿದ್ದಾರೆ ಎಂದು ಆತನ ತಂದೆ ಆರೋಪಿಸಿದ್ದಾರೆ. ಈತ 5 ಲಕ್ಷ ರೂಪಾಯಿ ಸಾಲ ಮಾಡಿದ್ದ ಎಂದು ಅಂದಾಜಿಸಲಾಗಿದೆ . ತನಿಖೆಯ ಸಮಯದಲ್ಲಿ, ಪೊಲೀಸರು ಪ್ರವೀಣ್ ಅವರ ಸ್ನೇಹಿತರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಪೊಲೀಸರು ಫೋನ್ ವಶಪಡಿಸಿಕೊಂಡಿದ್ದು, ಮೃತನ ಜೂಜಾಟದ ಚಟುವಟಿಕೆಗಳಿಗೆ ಸಂಬಂಧಿಸಿದ ಹಣಕಾಸಿನ ವಹಿವಾಟುಗಳನ್ನು ವಿಶ್ಲೇಷಿಸುತ್ತಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಕೆಆರ್ ಪುರಂ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!