ಮೇಘನಾ ಶೆಟ್ಟಿ, ಶಿವಮೊಗ್ಗ
ನನ್ ಮಗಂಗೆ ರೈಮ್ಸ್ ಇಲ್ದೆ ಊಟನೇ ಒಳಗ್ ಹೋಗಲ್ಲ, ರೈಮ್ಸ್ ಹಾಕಿ ಕೊಟ್ರೆ ಕೊಟ್ಟಿದ್ದಷ್ಟೂ ತಿಂತಾನೆ.
ಅವಳಿಗೆ ರೈಮ್ಸ್ ಅಂದ್ರೆ ಎಷ್ಟ್ ಖುಷಿ ಗೊತ್ತಾ, ಎಷ್ಟು ಹೊತ್ತು ಬೇಕಾದ್ರೂ ರೈಮ್ಸ್ ನೋಡ್ಕೊಂಡು, ಕೊಟ್ಟಿದ್ದೆಲ್ಲಾ ತಿಂದು ಖಾಲಿ ಮಾಡ್ತಾರೆ, ಕೆಲ್ವೊಮ್ಮೆ ಇನ್ನು ಹಾಕಿಸ್ಕೊಂಡು ತಿಂತಾರೆ…
ಈ ಪೋಷಕರು ನೀವಾ? ಮಕ್ಕಳ ಊಟ ಮಾಡಿದ್ರೆ ಸಾಕು, ರೈಮ್ಸ್ ಆದ್ರೂ ನೋಡ್ಕೋಳ್ಳಿ ಅಂತೀರಾ? ನಾವು ನೆಮ್ಮದಿಯಾಗಿ ತಿನ್ನೋಕಾಗೋದಿಲ್ಲ. ಅವರು ಟಿವಿ ಲಿ ರೈಮ್ಸ್ ನೋಡ್ತಾರೆ, ನಾವು ಮೊಬೈಲ್‌ಲ್ಲಿ ಫಿಲಂ ನೋಡ್ತೀವಿ..
ಇಲ್ಲಿ ಕೇಳಿ, ಮಕ್ಕಳಿಗೆ ಊಟ ಮಾಡಿಸುವಾಗ ಚಂದಾಮಾಮನೂ ಬೇಡ, ರೈಮ್ಸ್ ಕೂಡ ಬೇಡ. ಏನು ತಿನ್ನುತ್ತಿದ್ದೇನೆ ಎನ್ನುವ ಪರಿವೇ ಇಲ್ಲದೆ ತಿನ್ನುವ ಮಕ್ಕಳಿಗೆ ಆಹಾರದ ಬಗ್ಗೆ ಪ್ರೀತಿ ಮೂಡೋದು ಹೇಗೆ?
ಬರೀ ತಿನ್ನುವಾಗ ಮಾತ್ರ ಟಿವಿ ತೋರಿಸ್ತೀವಿ ಅಂದ್ರೆ ಅದು ಕೂಡ ತಪ್ಪು, ಮಕ್ಕಳು ಟಿವಿ ನೋಡ್ತಾ ಯಾಕೆ ತಿನ್ನಬಾರದು ನೋಡಿ..
- ಅತಿಯಾಗಿ ತಿಂತಾರೆ, ಅದಕ್ಕೆ ಲಿಮಿಟ್ ಇಲ್ಲ. ಮಕ್ಕಳ ತೂಕ ಹೆಚ್ಚಾಯ್ತು ಎಂದು ಮುಂದೆ ಕೊರಗೋದಕ್ಕಿಂತ, ಈಗಲೇ ಊಟ ತಿಂಡಿ ಮೇಲೆ ಕಂಟ್ರೋಲ್ ಇಡಿ. ಏನು ತಿಂದೆ, ಎಷ್ಟು ತಿಂದೆ, ನನ್ನ ಹೊಟ್ಟೆಗೆ ಎಷ್ಟು ಊಟ ಬೇಕು? ನನ್ನ ಲಿಮಿಟ್ ಎಷ್ಟು? ಇದ್ಯಾವುದೂ ಮಕ್ಕಳಿಗೆ ತಿಳಿಯೋದಿಲ್ಲ. ತಿಂದು ತಿಂದು ಬೊಜ್ಜು ಬರುತ್ತದೆ.
- ಮೃಷ್ಟಾನ್ನ ಭೋಜನವನ್ನೇ ಮಕ್ಕಳ ಮುಂದೆ ಇಡಿ, ಅವರಿಗೆ ಅದರ ರುಚಿ ಗೊತ್ತಿಲ್ಲ. ಡಿಸ್ಟ್ರಾಕ್ಟ್ ಮಾಡುತ್ತಾ ತಿನಿಸಬಹುದು, ಆದರೆ ದೇಹಕ್ಕೆ ಸೂಕ್ತವಾದ ಸಿಗ್ನಲ್ಸ್ ಹೋಗದೆ ಮಕ್ಕಳಿಗೆ ಏನು ತಿಂದೆ ಎನ್ನೋ ಅರಿವೇ ಇರೋದಿಲ್ಲ.
- ಸ್ನ್ಯಾಕ್ಸ್ ತಿನ್ನುತ್ತಾ ಟಿವಿ ನೋಡೋದು, ಟಿವಿ ನೋಡೋದಕ್ಕಾಗಿ ಸ್ನ್ಯಾಕ್ಸ್ ತಿನ್ನೋದು ಮುಂದೆ ಇದೇ ಒಂದು ಅಭ್ಯಾಸವಾಗಿ ಬಿಡುತ್ತದೆ.
- ಕೂತಲ್ಲೇ ಕೂತು ತಿನ್ನೋ ಮಕ್ಕಳಿಗೆ ಜೀರ್ಣಕ್ರಿಯೆ ಆಗೋದು ಹೇಗೆ? ತಿಂದ ಮೇಲೂ ಅವರಿಗೆ ಟಿವಿ ಬೇಕು, ತಿಂದಿದ್ದು ಕರಗೋದು ಹೇಗೆ?
- ಫ್ಯಾಮಿಲಿ ಜೊತೆ ಮಾತನಾಡೋದು ಯಾವಾಗ? ಎಲ್ಲರೂ ಒಟ್ಟಿಗೇ ಕುಳಿತು ತಮ್ಮ ದಿನ ಹೇಗಾಯ್ತು? ಖುಷಿ ನೆನಪುಗಳನ್ನು ಹಂಚಿಕೊಳ್ಳೋಕೆ ಇದು ಉತ್ತಮ ಸಮಯ. ಫ್ಯಾಮಿಲಿ ಜೊತೆ ಮಕ್ಕಳಿಗೆ ಬಾಂಡಿಂಗ್ ಇಲ್ಲದಂತೆ ಆಗುತ್ತದೆ.
- ಹಠ ಮಾಡುತ್ತಾರೆ, ಎಲ್ಲಿಗೆ ಹೋದರೂ ಮೊಬೈಲ್ ಕೇಳೋದು, ಯಾರೊಂದಿಗೂ ಮಾತನಾಡದೆ ಇರೋದು, ಮೊಬೈಲ್ ಇಲ್ಲದೆ ಊಟ ಮಾಡದೇ ಇರುವುದು ಇಂಥ ಅಭ್ಯಾಸ ಮಾಡಿಕೊಳ್ತಾರೆ.