ಯಾರೀತ ಪಂಜಾಬಿನ ಹೊಸ ‘ಖಾಲಿಸ್ತಾನಿ’ ಗೂಂಡಾ ಅಮೃತಪಾಲ್ ಸಿಂಗ್?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪಾಕಿಸ್ತಾನದ ಗಡಿಭಾಗದಲ್ಲಿರುವ ಭಾರತದ ಪಂಜಾಬ್‌ ರಾಜ್ಯದಲ್ಲೀಗ ಮತ್ತೊಮ್ಮೆ ಖಾಲಿಸ್ತಾನ್‌ ಕೂಗು ಜೋರಾಗಿದೆ. ʼಅಮೃತ್‌ಪಾಲ್‌ ಸಿಂಗ್‌ʼ ಎಂಬ ತಥಾಕಥಿತ ಸಿಖ್‌ ನಾಯಕನ ನೇತೃತ್ವದಲ್ಲಿ ಅನೇಕ ಸಿಖ್ಖರು ಪ್ರಚೋದನೆಗೊಳಪಟ್ಟು ಖಾಲಿಸ್ತಾನ್ ಕೂಗು ಮೊಳಗಿಸುತ್ತಿದ್ದಾರೆ. ಎರಡು ದಶಕಗಳಹಿಂದೆ ತಣ್ಣಗಾಗಿದ್ದ ಪ್ರತ್ಯೇಕತಾವಾದವೀಗ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಶಸ್ತ್ರಾಸ್ತ್ರಗಳನ್ನು ಹಿಡಿದುಬಂದ ಖಾಲಿಸ್ತಾನಿಗಳು ಪೋಲೀಸರ ಮೇಲೆಯೇ ಹಲ್ಲೆ ಮಾಡಿ ಠಾಣೆಗೆ ನುಗ್ಗಿರೋ ಘಟನೆಗಳ ಕುರಿತು ಎಲ್ಲೆಡೆ ವರದಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಯಾರೀತ ಅಮೃತ್‌ಪಾಲ್‌ ಸಿಂಗ್‌ ? ಏನೀ ಘಟನೆಯ ಹಿನ್ನೆಲೆ ಇತ್ಯಾದಿ ಅಂಶಗಳ ಕುರಿತಾದ ವಿವರಣೆ ಇಲ್ಲಿದೆ ನೋಡಿ

ಖಾಲಿಸ್ತಾನ್‌ ಎಂಬ ಪ್ರತ್ಯೇಕತೆಯ ಹುಟ್ಟು:
ಖಾಲಿಸ್ತಾನ್‌ ಎಂಬುದು 1986ರಲ್ಲಿ ಹುಟ್ಟಿಕೊಂಡ ಪ್ರತ್ಯೇಕತಾವಾದ. ಪ್ರಸ್ತುತ ಭಾರತದ ಭಾಗವಾಗಿರೋ ಪಂಜಾಬ್‌, ಹಾಗೆಯೇ ಪಾಕಿಸ್ತಾನದ ಲಾಹೋರ್‌ & ಪಂಜಾಬ್‌ ಹೀಗೆ ಹಿಂದೆ ಖಾಲ್ಸಾ ಆಡಳಿತದ ಕಾಲದಲ್ಲಿ ಯಾವೆಲ್ಲ ಪ್ರದೇಶಗಳು ಸಿಖ್ಖರ ಆಡಳಿತಕ್ಕೊಳಪಟ್ಟಿದ್ದವೋ ಅವುಗಳನ್ನು ಒಗ್ಗೂಡಿಸಿ ಸಿಖ್ಖರಿಗೆಂದೇ ಪ್ರತ್ಯೇಕ ನೆಲವನ್ನು ಸೃಷ್ಟಿಸುವ ಹೆಸರಿನಲ್ಲಿ ಹುಟ್ಟಿಕೊಂಡ ಪ್ರತ್ಯೇಕತಾ ಚಳುವಳಿಯಿದು. ಜರ್ನೈಲ್ ಸಿಂಗ್ ಭಿಂದ್ರನ್ವಾಲೆ ಈ ಚಳುವಳಿಯ ಸೃಷ್ಟಿಕರ್ತ. ಖಾಲಿಸ್ತಾನದ ಬೇಡಿಕೆಯನ್ನು ಮುಂದಿಟ್ಟು ಉಗ್ರವಾದಿ ಕೃತ್ಯಗಳನ್ನು ನಡೆಸುತ್ತ ಪಂಜಾಬಿನ ʼಗೋಲ್ಡನ್‌ ಟೆಂಪಲ್‌ʼ ಅನ್ನು ವಶಪಡಿಸಿಕೊಂಡು ಕೂತಿದ್ದ ಈತ ಹಾಗು ಇತರ ಖಾಲಿಸ್ತಾನಿಗಳನ್ನು ʼಆಪರೇಷನ್‌ ಬ್ಲೂ ಸ್ಟಾರ್‌ʼ ಕಾರ್ಯಾಚರಣೆಯ ಮೂಲಕ ಅಂದಿನ ಪ್ರಧಾನಿ ಇಂಧಿರಾಗಾಂಧಿಯವರು ತಣ್ಣಗಾಗಿಸಿದ್ದರು. ಇದು ಪ್ರಧಾನಿ ಇಂದಿರಾಗಾಂಧಿಯವರ ಹತ್ಯೆಗೂ ಕಾರಣವಾಗಿತ್ತು. ಭಿಂದ್ರನ್ವಾಲೇ ಮರಣಾನಂತರ ಖಾಲಿಸ್ತಾನದ ಕೂಗು ಕಡಿಮೆಯಾಗಿತ್ತು. ಆಗೊಮ್ಮೆ, ಈಗೊಮ್ಮೆ ಅಲ್ಲಲ್ಲಿ ಕೇಳಿಬರುತ್ತಲೇ ಇತ್ತಾದರೂ ಅಷ್ಟೊಂದು ಪ್ರಖರವಾಗಿರಲಿಲ್ಲ. ಕಳೆದ ವರ್ಷ ದೆಹಲಿಯಲ್ಲಿ ಕೃಷಿಕಾಯಿದೆಯ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ಕಾಣದ ಖಾಲಿಸ್ತಾನಿ ಕೈಗಳು ಕೆಲಸ ಮಾಡಿ ಮತ್ತೊಮ್ಮೆ ಮುನ್ನೆಲೆಗೆ ಬಂದಿತ್ತು. ಇದೀಗ ಅಮೃತ್‌ ಪಾಲ್‌ ಸಿಂಗ್‌ ಎಂಬಾತನ ನೇತೃತ್ವದಲ್ಲಿ ಪಂಜಾಬಿನಲ್ಲಿ ಮತ್ತೊಮ್ಮೆ ಖಾಲಿಸ್ತಾನ್‌ ಪ್ರತ್ಯೇಕತೆಯ ಕೂಗು ಕೇಳಿಸುತ್ತಿದೆ.

ಯಾರೀತ ಅಮೃತ್‌ಪಾಲ್‌ ಸಿಂಗ್ ?

ಪ್ರಸ್ತುತ ಪಂಜಾಬಿನ ಅಂಜಾಲಾ ದಲ್ಲಿ ಪೋಲೀಸರ ಮೇಲೆಯೇ ಹಲ್ಲೆ ಮಾಡಿ ಖಾಲಿಸ್ತಾನ್‌ ಪ್ರತ್ಯೇಕತಾವಾದದ ಕೂಗು ಹಾಕಿರೋ ಅಮೃತ್‌ ಪಾಲ್‌ ಸಿಂಗ್‌ ʼವಾರೀಸ್‌ ಪಂಜಾಬ್‌ ದೇʼ ಎಂಬ ಸಂಘಟನೆಯ ಮುಖ್ಯಸ್ಥ. ಇದು ಸಿಖ್ಖರಿಗೆಂದೇ ಪಂಜಾಬಿ ನಟ ದೀಪ್ ಸಿಧು ಸ್ಥಾಪಿಸಿದ ಸಂಘಟನೆ. ದುಬೈನಿಂದ ವಾಪಸ್ಸಾದ ಅಮೃತ್‌ ಪಾಲ್‌ ಸಿಂಗ್‌ ಕಳೆದ ವರ್ಷ ದೀಪ್‌ ಸಿಧು ಸಾವಿನ ನಂತರ ಈ ಸಂಘಟನೆಯ ಮುಖ್ಯಸ್ಥನಾಗಿ ನೇಮಕಗೊಂಡಿದ್ದ. ಅಲ್ಲಿಂದಲೂ ಸಕ್ರಿಯನಾಗಿರುವ ಈತ ಖಾಲಿಸ್ತಾನ್‌ ಎಂಬ ಪ್ರತ್ಯೇಕತೆಯ ಕೂಗನ್ನು ಮತ್ತೆ ಮುನ್ನೆಲೆಗೆ ತರುತ್ತಿದ್ದಾನೆ. ಪಂಜಾಬಿನ ಜನರನ್ನು ಪ್ರಚೋದಿಸಿ ಮತ್ತೊಮ್ಮೆ ಖಾಲಿಸ್ತಾನ್‌ ಚಳುವಳಿಯ ಹುಟ್ಟಿಗೆ ಕಾರಣೀಭೂತನಾಗಿದ್ದಾನೆ. ಪಂಜಾಬಿನಲ್ಲಿ ಅನೇಕ ಅಪಹರಣ, ಬೆದರಿಕೆಯಂತಹ ಪ್ರಕರಣಗಳಲ್ಲಿ ಈತನ ಹೆಸರು ಕೇಳಿಬರುತ್ತಿದೆ. ಇತ್ತೀಚೆಗೆ ಭಾರತದ ಗೃಹ ಮಂತ್ರಿ ಅಮಿತ್‌ ಶಾ ವಿರುದ್ಧವಾಗಿ ಮಾತನಾಡಿರುವ ಈತ ʼತಮ್ಮ ಅಂಗರಕ್ಷಕರಿಂದಲೇ ಹತ್ಯೆಗೀಡಾದ ಇಂಧಿರಾಗಾಂಧಿಯವರ ಪರಿಸ್ಥಿತಿ ನಿಮಗೂ ಬರುತ್ತದೆʼ ಅಂತ ಬೆದರಿಕೆಯನ್ನೂ ಹಾಕಿದ್ದ. ಅಲ್ಲದೇ ʼಪಂಜಾಬ್‌ ನಮ್ಮದು, ಇಲ್ಲಿ ಖಾಲ್ಸಾ ಆಡಳಿತವನ್ನು ನಾವು ಸ್ಥಾಪಿಸುತ್ತೇವೆ. ಮೊದಲು ಭಾರತದ ಪಂಜಾಬ್‌ ನಮ್ಮದಾಗಿಸಿಕೊಂಡು ನಂತರ ಪಾಕಿಸ್ತಾನದ ಪಂಜಾಬನ್ನು ವಶಪಡಿಸಿಕೊಳ್ಳುತ್ತೇವೆ, ಹಿಂದೆ ಎಲ್ಲೆಲ್ಲೆ ಖಾಲ್ಸಾ ರಾಜ್ಯವಿತ್ತೋ ಅಲ್ಲೆಲ್ಲ ಮತ್ತೆ ಅದನ್ನು ಪುನಃ ಸ್ಥಾಪಿಸುತ್ತೇವೆʼ ಅಂತಲೂ ಮಾಧ್ಯಮಗಳಲ್ಲಿ ಗಂಟಾಘೋಷವಾಗಿ ಮಾತನಾಡಿದ್ದಾನೆ.

ಪಂಜಾಬಿನಲ್ಲಿ ನಡೆದಿದ್ದೇನು?
ಫೆಬ್ರವರಿ 23 ರಂದು ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಅಮೃತ್‌ ಪಾಲ್‌ ಸಿಂಗ್‌ ಸಹಚರನಾದ ಲವ್‌ಪ್ರೀತ್‌ ಸಿಂಗ್‌ ಎಂಬಾತನ್ನನು ಪಂಜಾಬ್‌ ಪೋಲೀಸರು ಬಂಧಿಸಿದ್ದರು. ಇದನ್ನು ವಿರೋಧಿಸಿ ಅಮೃತಪಾಲ್‌ ಸಿಂಗ್‌ ಹಾಗು ಆತನ ನೂರಾರು ಸಹಚರರು ಪೋಲೀಸರ ವಿರುದ್ಧವೇ ಹಲ್ಲೆ ನಡೆಸಿದರು. ಶಸ್ತ್ರಾಸ್ತ್ರಗಳನ್ನು ಹಿಡಿದು ಠಾಣೆಗೆ ನುಗ್ಗಿ ತನ್ನ ಸಹಚರನನ್ನು ಬಿಡುವಂತೆ ಸರ್ಕಾರಕ್ಕೆ ಅಮೃತ್‌ಪಾಲ್‌ ಸಿಂಗ್‌ ಧಮ್ಕೀ ಹಾಕಿದ್ದಾನೆ. ಇದಕ್ಕೆ ತಕ್ಕ ಪ್ರತ್ಯತ್ತರ ನೀಡಿ ಕಾನೂನು ಸುವ್ಯವಸ್ಥೆ ಕಾಪಾಡಬೇಕಿದ್ದ ಸರ್ಕಾರ ಆತನನ್ನು ಬಿಡುಗಡೆ ಮಾಡಿ ಕಳಿಸಿದೆ. ಈ ಹಿಂದೆ ಫೆಬ್ರವರಿ 8 ರಂದು ಕೂಡ ಮೊಹಾಲಿಯಲ್ಲಿ ಇದೇರೀತಿ ಖಾಲಿಸ್ತಾನಿ ಗೂಂಡಾಗಳು ಪೋಲೀಸರ ಮೇಲೆಯೇ ಹಲ್ಲೆ ಮಾಡಿದ್ದರು. ಆದರೆ ಪಂಜಾಬಿನಲ್ಲಿ ಆಡಳಿತದಲ್ಲಿರುವ ಆಮ್‌ ಆದ್ಮಿ ಪಕ್ಷದ ಭಗವಂತ ಮಾನ್‌ ಸರ್ಕಾರ ಅವರನ್ನು ಬಂಧಿಸದೇ ಹಾಗೆಯೇ ಬಿಟ್ಟಿತ್ತು. ಇದೀಗ ಮತ್ತೊಮ್ಮೆ ಅದೇ ರೀತಿಯ ಘಟನೆ ಪುನರಾವರ್ತಿತವಾಗಿದೆ. ಈ ಭಾರಿ ಖಲಿಸ್ತಾನಿಗೂಂಡಾಗಳು ಮತ್ತಷ್ಟು ಪ್ರಬಲರಾಗಿದ್ದಾರೆ. ಆದರೆ ಸರ್ಕಾರ ಅವರನ್ನು ಬಂಧಿಸಲು, ಅವರ ವಿರುದ್ಧ ಛಾರ್ಜ್‌ ಶೀಟ್‌ ಹಾಕಲು ಮೀನಮೇಷ ಎಣಿಸುತ್ತಿದೆ.

ವಿದೇಶೀ ಶಕ್ತಿಗಳ ಬೆಂಬಲದಲ್ಲಿದೆ ʼಖಾಲಿಸ್ತಾನ್‌ʼ :
ಈ ಖಾಲಿಸ್ತಾನ್‌ ಪ್ರತ್ಯೇಕತಾ ವಾದಕ್ಕೆ ವಿದೇಶಿ ಶಕ್ತಿಗಳ ಕುಮ್ಮಕ್ಕೂ ದೊರಯುತ್ತಿದ್ದು ಇದಕ್ಕೆಂದೇ ಅಪಾರ ಪ್ರಮಾಣದಲ್ಲಿ ಹಣ ಹರಿದುಬರುತ್ತಿದೆ. ಪ್ರಪಂಚದಾದ್ಯಂತ ಎಂಟು ದೇಶಗಳಲ್ಲಿ ಖಾಲಿಸ್ತಾನ್‌ ಉಗ್ರವಾದ ದಿನೇ ದಿನೇ ಹೆಚ್ಚಾಗುತ್ತಿದೆ ಎಂಬುದನ್ನು ಹಲವು ವರದಿಗಳು ಉಲ್ಲೇಖಿಸಿವೆ. ಆಸ್ಟ್ರೇಲಿಯಾ, ಕೆನಡಾ, ಅಮೆರಿಕ ಇಲ್ಲೆಲ್ಲ ಖಾಲಿಸ್ಥಾನಿ ಗೂಂಡಾಗಳು ಭಾರತ ವಿರೋಧಿ ಕಾರ್ಯಗಳನ್ನು ನಡೆಸುತ್ತಿರುವ ಘಟನೆಗಳು ವರದಿಯಾಗಿವೆ. ಪಂಜಾಬಿನ ಪಾಕಿಸ್ತಾನ ಗಡಿಭಾಗದ ಜಿಲ್ಲೆಗಳಲ್ಲಿ ಖಾಲಿಸ್ತಾನ್‌ ಚಳುವಳಿ ತೀವ್ರವಾಗಿ ಬೆಳವಣಿಗೆಯಾಗುತ್ತಿದೆ, ಮಾದಕವಸ್ತುಗಳ ಕಳ್ಳಸಾಗಣೆ, ಶಸ್ತ್ರಾಸ್ತ್ರ ಕಳ್ಳಸಾಗಣೆ ಸೇರಿದಂತೆ ಅಪರಾಧಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ, ಇಷ್ಟೆಲ್ಲ ಕಾನೂನು ಸುವ್ಯವಸ್ಥೆ ಹದಗೆಡುತ್ತಿದ್ದರೂ ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಮಾನ್‌ ಮಾತ್ರ ರಾಜ್ಯದಲ್ಲಿ ಅಪರಾಧಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ಫೇಕ್‌ ನರೇಟಿವ್‌ ಸೃಷ್ಟಿಸುತ್ತಿದ್ದಾರೆ. ಈಗ ಪೋಲೀಸರ ಮೇಲೆಯೇ ಹಲ್ಲೆ ಮಾಡಿರುವ ಘಟನೆಯ ನಂತರವೂ ಅಧಿಕಾರದಲ್ಲಿರುವ ಆಪ್‌ ಸರ್ಕಾರ ಮೌನಕ್ಕೆ ಶರಣಾಗಿ ಕೈಕಟ್ಟಿ ಕೂತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!